ಬರೇಲಿ, ಉತ್ತರಪ್ರದೇಶ: ಬರೇಲಿಯಲ್ಲಿ ಪೊಲೀಸರ ದೊಡ್ಡ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಶುಕ್ರವಾರ ಬರೇಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಇಬ್ಬರು ಕೈದಿಗಳು ನ್ಯಾಯಾಲಯದ ಲಾಕಪ್‌ನಿಂದ ಪರಾರಿಯಾಗಿದ್ದಾರೆ. ಜೈಲಿನ ಕಿಟಕಿಯ ಸರಳುಗಳನ್ನು ಕತ್ತರಿಸಿ ಕೈದಿಗಳು ಪರಾರಿಯಾಗಿರುವುದು ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುವಂತೆ ಮಾಡಿದೆ.
ಸಂಜೆ ಎಲ್ಲಾ ಕೈದಿಗಳನ್ನು ವಿಚಾರಣೆಯಿಂದ ಹಿಂದಕ್ಕೆ ಕರೆದೊಯ್ಯುವಾಗ, ಎಣಿಕೆಯಲ್ಲಿ ಇಬ್ಬರು ಕೈದಿಗಳು ಕಡಿಮೆ ಆಗಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 3 ಪೊಲೀಸ್ ಸಿಬ್ಬಂದಿಯನ್ನು ಎಸ್‌ಎಸ್‌ಪಿ ಅಮಾನತುಗೊಳಿಸಿದ್ದಾರೆ.
ಶುಕ್ರವಾರ ಬರೇಲಿ ನ್ಯಾಯಾಲಯದಲ್ಲಿ ಸಂಚಲನ ಉಂಟಾಗಿದ್ದು, ಕೈದಿಗಳನ್ನು ಮತ್ತೆ ಜೈಲಿಗೆ ಕರೆದೊಯ್ಯುವ ಸರದಿ ಬಂದಿತ್ತು. ಎಣಿಕೆಯಲ್ಲಿ 2 ಕೈದಿಗಳು ಕಡಿಮೆ ಇದ್ದರು. ಇಬ್ಬರೂ ಕೈದಿಗಳು ಜೈಲಿನ ಕಿಟಕಿಯ ಸರಳುಗಳನ್ನು ಕತ್ತರಿಸಿ ಪರಾರಿಯಾಗಿದ್ದರು. ಮರದ ಕೊಂಬೆಯ ಸಹಾಯದಿಂದ ಗೋಡೆ ಹಾರಿ ಎಸ್ಕೇಪ್ ಆಗಿದ್ದರು. ಕೈದಿಗಳ ರಕ್ಷಣೆಯಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿಗೆ ಇದರ ಅರಿವೇ ಇರಲಿಲ್ಲ. ಇದರಿಂದ ಪೊಲೀಸರಲ್ಲಿ ಆತಂಕ ಮೂಡಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ತರಾತುರಿಯಲ್ಲಿ ಎಸ್‌ಎಸ್‌ಪಿ ಮತ್ತು ಇತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನ್ಯಾಯಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆದರೆ, ತಪ್ಪಿಸಿಕೊಂಡ ಕೈದಿಗಳ ಯಾವುದೇ ಕುರುಹು ಪತ್ತೆಯಾಗಲಿಲ್ಲ.
ಕೈದಿಗಳ ಭದ್ರತೆಗಾಗಿ ನಿಯೋಜಿಸಲಾದ ಇನ್ಸ್‌ಪೆಕ್ಟರ್ ವೀರೇಂದ್ರ ಸಿಂಗ್ ಮಾತನಾಡಿ, ಕೈದಿಗಳಾದ ಅಂಕಿತ್ ಯಾದವ್ ಮತ್ತು ಸಚಿನ್ ಸೈನಿ ಅವರನ್ನು ಪ್ರಕರಣವೊಂದರಲ್ಲಿ ಬಂಧಿಸಲಾಗಿತ್ತು. ಶುಕ್ರವಾರ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇಬ್ಬರಿಗೂ ಬೇಡಿ ಹಾಕಲಾಗಿದ್ದು, ನ್ಯಾಯಾಲಯದ ಲಾಕಪ್‌ನಿಂದ ಪರಾರಿಯಾಗಿದ್ದಾರೆ. ಸಚಿನ್ ಸೈನಿಗೆ ಪೋಸ್ಕೋ ಕೋರ್ಟ್ 5 ವರ್ಷ ಶಿಕ್ಷೆ ವಿಧಿಸಿದೆ. ಅಂಕಿತ್ ಯಾದವ್ ವಿರುದ್ಧ ಸುಮಾರು 47 ಪ್ರಕರಣಗಳು ದಾಖಲಾಗಿವೆ ಎಂದು ಇನ್ಸ್‌ಪೆಕ್ಟರ್ ಹೇಳಿದರು.
ಶುಕ್ರವಾರ ಸಂಜೆ ಇಬ್ಬರು ಕೈದಿಗಳು ನ್ಯಾಯಾಲಯದ ಲಾಕಪ್ ಮುರಿದು ಪರಾರಿಯಾಗಿದ್ದಾರೆ ಎಂದು ಎಸ್‌ಎಸ್‌ಪಿ ಧುಲೆ ಸುಶೀಲ್ ಚಂದ್ರಭಾನ್ ತಿಳಿಸಿದ್ದಾರೆ. ಇಬ್ಬರೂ ಕೈದಿಗಳ ಶೋಧಕ್ಕಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಕೈದಿಗಳ ಭದ್ರತೆಗೆ ನಿಯೋಜನೆಗೊಂಡಿದ್ದ ಇನ್ಸ್‌ಪೆಕ್ಟರ್ ವೀರೇಂದ್ರ ಸಿಂಗ್ ಹಾಗೂ ಇಬ್ಬರು ಕಾನ್ಸ್ಟೇಬಲ್ಗಳನ್ನು ನಿರ್ಲಕ್ಷ್ಯದ ಕಾರಣದಿಂದ ಅಮಾನತುಗೊಳಿಸಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರೂ ಕೈದಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್‌ಎಸ್‌ಪಿ ಹೇಳಿದರು.
ಓದಿ: ರಣ ಭೀಕರ ದುರಂತ: ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ, 7 ಮಕ್ಕಳು ಸೇರಿ 15 ಜನರ ಸಾವು