ವೈಶಾಲಿ (ಬಿಹಾರ) : ಬಿಹಾರದ ವೈಶಾಲಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಾರುಕಟ್ಟೆಗೆ ಹೋಗುತ್ತಿದ್ದ ಇಬ್ಬರು ಬಾಲಕಿಯರ ಮೇಲೆ 6 ರಿಂದ 7 ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ವಿಷಯ ಬೆಳಕಿಗೆ ಬಂದ ನಂತರ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ, ಇತರ ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ.
ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ : ಘಟನೆ ಮಹುವಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ. ಬಾಲಕಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಮಾರುಕಟ್ಟೆಗೆ ಹೋಗಿದ್ದ ವೇಳೆ ಮಾರ್ಗಮಧ್ಯೆ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಸಂತ್ರಸ್ತೆಯ ಜೊತೆಗೆ ಆಕೆಯ ಸ್ನೇಹಿತೆ ಕೂಡ ಅಪರಾಧಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ನಂತರ ಇಬ್ಬರೂ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾರೆ. ಘಟನೆಯ ನಂತರ ಸಂತ್ರಸ್ತೆ ಮಹುವಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಆರೋಪಿಗಳಲ್ಲಿ ಒಬ್ಬ ಸಂತ್ರಸ್ತೆಯ ಸಂಬಂಧಿ : ಈ ಸಂಪೂರ್ಣ ಸರಣಿ ಘಟನೆಗಳ ಹಿಂದೆ ಸಂತ್ರಸ್ತೆಯ ಸೋದರ ಮಾವನ ಮಾಸ್ಟರ್ ಮೈಂಡ್ ಇದೆ ಎಂದು ಹೇಳಲಾಗುತ್ತಿದೆ. ಅವರೇ ತಮ್ಮ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು, ಇತರರನ್ನು ಬಂಧಿಸಲು ಮುಂದಾಗಿದ್ದಾರೆ.
"ಇಬ್ಬರು ಬಾಲಕಿಯರ ಮೇಲೆ ಕೆಲವು ಹುಡುಗರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮಹುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ವಿಷಯದ ಗಂಭೀರತೆಯನ್ನು ಪರಿಗಣಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಈ ಘಟನೆಯಲ್ಲಿ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ" ಎಂದು ಮಹುವ ಎಸ್ಡಿಪಿಒ ಸುರಭ್ ಸುಮನ್ ಅವರು ಮಾಹಿತಿ ನೀಡಿದ್ದಾರೆ.
"ಇಬ್ಬರು ಬಾಲಕಿಯರು ಮಾರುಕಟ್ಟೆಗೆ ಹೋಗುತ್ತಿದ್ದಾಗ, ಅವರನ್ನು ದಾರಿಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಒಂದೇ ಗ್ರಾಮದ 6 ರಿಂದ 7 ಹುಡುಗರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಒಬ್ಬ ಹುಡುಗ ಅವರ ಸಂಬಂಧಿಯಾಗಿದ್ದಾನೆ'' ಎಂದಿದ್ದಾರೆ.
ಇದನ್ನೂ ಓದಿ: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಸ್ನೇಹಿತ ಸೇರಿ ಮೂವರ ಬಂಧನ