ಗೊಂಡಾ (ಉತ್ತರ ಪ್ರದೇಶ): ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಶರಣ್ ಪುತ್ರ, ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಕರಣ್ ಭೂಷಣ್ ಸಿಂಗ್ ಅವರ ಬೆಂಗಾವಲು ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿ, ಮತ್ತೋರ್ವ ಮಹಿಳೆ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಈ ಘಟನೆ ಸಂಬಂಧ ಕಾರು ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಕರ್ನಲ್ ಗಂಜ್-ಹುಜೂರ್ ಪುರ್ ರಸ್ತೆಯಲ್ಲಿ ಸುಮಾರು ಬೆಳಗ್ಗೆ 9 ಗಂಟೆಗೆ ಈ ದುರ್ಘಟನೆ ಜರುಗಿದೆ. ಮೃತರನ್ನು ರೆಹಾನ್ ಖಾನ್ (17) ಮತ್ತು ಶೆಹಜಾದ್ ಖಾನ್ (20) ಎಂದು ಗುರುತಿಸಲಾಗಿದೆ. ಗಾಯಾಳು ಸೀತಾದೇವಿ (60) ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಲಿ ಕೈಸರ್‌ಗಂಜ್ ಕ್ಷೇತ್ರದ ಸಂಸದರಾಗಿದ್ದು, ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಈ ಬಾರಿ ಬ್ರಿಜ್ ಭೂಷಣ್ ಬದಲಿಗೆ ಪುತ್ರ ಕರಣ್ ಭೂಷಣ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಕರಣ್ ಭೂಷಣ್ ಸಹ ಉತ್ತರ ಪ್ರದೇಶದ ಕುಸ್ತಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ.
ನಡೆದಿದ್ದೇನು?: ಬಿಜೆಪಿ ಅಭ್ಯರ್ಥಿಯಾದ ಕರಣ್ ಭೂಷಣ್ ಕರ್ನಲ್ ಗಂಜ್-ಹುಜೂರ್ ಪುರ್ ರಸ್ತೆಯ ಇಂದು ಪ್ರಯಾಣಿಸುತ್ತಿದ್ದರು. ಇವರ ಹಿಂದೆ ಇತರ ಕಾರುಗಳ ಬೆಂಗಾವಲು ಪಡೆಯೂ ಇತ್ತು. ಈ ವೇಳೆ, ಫಾರ್ಚುನರ್ ಕಾರು ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ರೆಹಾನ್, ಶೆಹಜಾದ್ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ, ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೀತಾದೇವಿ ಅವರಿಗೂ ಕಾರು ಗುದ್ದಿದೆ. ಸದ್ಯ ಸೀತಾದೇವಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕರ್ನಲ್‌ಗಂಜ್ ಠಾಣೆಯ ಪೊಲೀಸ್ ಅಧಿಕಾರಿ ನಿರ್ಭಯ್ ನಾರಾಯಣ್ ಸಿಂಗ್ ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಕಾರು ಚಾಲಕ ಲವ್ ಕುಶ್ ಶ್ರೀವಾಸ್ತವ ಎಂಬಾತನನ್ನು ಬಂಧಿಸಲಾಗಿದೆ. ವಾಹನವನ್ನೂ ವಶಕ್ಕೆ ಪಡೆಯಲಾಗಿದೆ. ಮತ್ತೊಂದೆಡೆ, ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಇಡೀ ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರಣ್ ಭೂಷಣ್ ಸಿಂಗ್ ಮೊದಲ ವಾಹನದಲ್ಲಿ ಕುಳಿತಿದ್ದರು. ಇವರ ಬೆಂಗಾವಲು ಪಡೆಯಲ್ಲಿ ಒಟ್ಟು ನಾಲ್ಕು ವಾಹನಗಳಿದ್ದವು. ಬೈಕ್ಗೆ ಡಿಕ್ಕಿ ಹೊಡೆದ ಕಾರು ಬೆಂಗಾವಲು ಪಡೆಯ ಕೊನೆಯಲ್ಲಿತ್ತು. ಈ ಕಾರು ವೇಗ ಗಂಟೆಗೆ 100 ಕಿಮೀ ಮೀರಿತ್ತು ಎಂದು ಅಪಘಾತ ಸ್ಥಳವನ್ನು ಪರಿಶೀಲಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆ ಎಷ್ಟು ಭೀಕರವಾಗಿ ಇಷ್ಟು ಎಂದರೆ, ಬೈಕ್ಗೆ ಡಿಕ್ಕಿ ಹೊಡೆದ ನಂತರ ಕಾರು ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ರಸ್ತೆ ಉದ್ದಕ್ಕೂ ಹೊಲಗಳಲ್ಲಿ ನಿರ್ಮಿಸಿದ ಹತ್ತಕ್ಕೂ ಹೆಚ್ಚು ಸಿಮೆಂಟ್ ಕಂಬಗಳಿಗೂ ಗುದ್ದಿದ್ದಾನೆ ಎಂದು ಅವರು ವಿವರಿಸಿದ್ದಾರೆ.
2023ರ ಡಿಸೆಂಬರ್ 21ರಂದು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಾರಿಗೆ 2,000 ದಂಡ ರೂ. ವಿಧಿಸಲಾಗಿತ್ತು. ಈ ದಂಡವನ್ನು ಇನ್ನೂ ಪಾವತಿಸಿಲ್ಲ. ಕಾರಿನ ಹಿಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ 'ಪೊಲೀಸ್ ಎಸ್ಕಾರ್ಟ್' ಎಂದು ಬರೆಯಲಾಗಿದೆ. ಅಪಘಾತದ ಸಮಯದಲ್ಲಿ ಕಾರಿನ ಏರ್‌ಬ್ಯಾಗ್‌ಗಳ ಕಾರಣ ಅಲ್ಲಿದ್ದ ಪ್ರಯಾಣಿಕರನ್ನು ಅಪಾಯದಿಂದ ಪಾರಾಗಿದ್ದಾರೆ. ಒಂದು ಟೈರ್ ಪಂಕ್ಚರ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ರೆಹಾನ್, ಶೆಹಜಾದ್ ಇಬ್ಬರೂ ಸಂಬಂಧಿಕರಾಗಿದ್ದಾರೆ. ಇತ್ತೀಚೆಗೆ ಶೆಹಜಾದ್ ದುಬೈನಿಂದ ಬಂದಿದ್ದ. ರೆಹಾನ್ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಆತನನ್ನು ಬೈಕ್ ಮೇಲೆ ಶೆಹಜಾದ್ ಚಿಕಿತ್ಸೆಗಾಗಿ ಕರ್ನಲ್‌ಗಂಜ್‌ಗೆ ಹೋಗುತ್ತಿದ್ದ ಎಂದು ರೆಹಾನ್‌ನ ಸಂಬಂಧಿ ನೌಶಾದ್ ಹೇಳಿದ್ದಾರೆ.
ಇದನ್ನೂ ಓದಿ: ಕೆನಾಲ್ಗೆ ಉರುಳಿಬಿದ್ದು ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ 6 ಜನ ಸಾವು