ಲಖನೌ(ಉತ್ತರ ಪ್ರದೇಶ): ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅಚ್ಚರಿಯ ವಿಚ್ಛೇದನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಇಬ್ಬರು ಯುವತಿಯರು ಪರಸ್ಪರ ಪತಿಯನ್ನು ಬದಲಾಯಿಸಿಕೊಂಡಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಈ ಸಂಬಂಧ ನಡೆದಿರುವುದು ಬಯಲಾಗಿದೆ.
ಸಂಪೂರ್ಣ ವಿವರ: ಬಹ್ರೈಚ್‌ನ ಯುವತಿ 2019ರಲ್ಲಿ ವಿವಾಹವಾಗಿದ್ದಳು. ಗಂಡ, ಹೆಂಡತಿ ಇಬ್ಬರೂ ದೆಹಲಿಯ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಒಂದು ದಿನ ಈಕೆ ಪತಿಯೊಂದಿಗೆ ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದಾಳೆ. ಆಗ ಸ್ನೇಹಿತೆಯ ಪತಿ ಮನೆಯಲ್ಲಿದ್ದರು. ನಂತರ ನಾಲ್ವರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟು, ಸಂಬಂಧ ಮತ್ತಷ್ಟು ಗಾಢವಾಗಿದೆ.
ಎರಡೂ ಜೋಡಿ ಡಿಸೆಂಬರ್ 2019ರಲ್ಲಿ ಒಟ್ಟಿಗೆ ಕ್ರಿಸ್ಮಸ್ ಆಚರಿಸಿದ್ದರು. ಸ್ನೇಹಿತರಿಬ್ಬರೂ ತಮ್ಮ ಗಂಡಂದಿರನ್ನು ವಿನಿಮಯ ಮಾಡಿಕೊಳ್ಳುವ ಯೋಜನೆಯನ್ನೂ ರೂಪಿಸಿದ್ದಾರೆ. ಇಬ್ಬರೂ ಅದಲು ಬದಲಾಗಿ ಗಂಡನ ಕೋಣೆಗೆ ಹೋಗಿದ್ದಾರೆ. ಇದಾದ ನಂತರ ಈ ಅನುಕ್ರಮ ಮುಂದುವರೆದಿದೆ. ಅಂದಿನಿಂದ ಈ ಬಾಂಧವ್ಯ ನಾಲ್ವರ ಪರಸ್ಪರ ಒಪ್ಪಿಗೆಯಿಂದಲೇ ಸಾಗಿದೆ.
ಬಹ್ರೈಚ್ ಹುಡುಗಿಯ ಪತಿ, ತನ್ನ ಪತ್ನಿಯ ಸ್ನೇಹಿತೆಯೊಂದಿಗೆ ಮತ್ತಷ್ಟು ಹತ್ತಿರವಾಗುತ್ತಾನೆ. ಇಬ್ಬರೂ ಒಟ್ಟಿಗೆ ಹೆಚ್ಚೆಚ್ಚು ಸಮಯ ಕಳೆಯಲು ಪ್ರಾರಂಭಿಸಿದ್ದಾರೆ. ಪರಸ್ಪರ ಪ್ರೀತಿಸತೊಡಗಿದ್ದಾರೆ. ಇದು ಪತ್ನಿಗೆ ಇಷ್ಟವಾಗಲಿಲ್ಲ. ಇದನ್ನು ಆಕೆ ವಿರೋಧಿಸಿದಾಗ ನಾಲ್ವರ ನಡುವೆ ಜಗಳ ಶುರುವಾಗಿದೆ. ವಿಚ್ಛೇದನ ಪಡೆಯದೇ ಪತಿ ಎರಡನೇ ಮದುವೆಯಾಗಿದ್ದಾರೆ ಎಂದು ಯುವತಿ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಹುಡುಗಿ ತನ್ನ ಪತಿಯನ್ನು ಬಿಡಲು ಬಯಸುವುದಿಲ್ಲ. ಆಕೆ ತನ್ನ ಗಂಡನೊಂದಿಗೆ ಅನೇಕ ಬಾರಿ ಜಗಳವಾಡಿದ್ದಾಳೆ. ಬಹ್ರೈಚ್‌ನ ಯುವತಿ ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದಾಗ, ಪತಿ ಲಖನೌದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಮತ್ತೊಂದೆಡೆ ಪತ್ನಿಯೂ ಪ್ರಕರಣ ದಾಖಲಿಸಿದ್ದು, ಗಂಭೀರ ಆರೋಪ ಮಾಡಿದ್ದಾಳೆ. ಎರಡೂ ಕಡೆಯಿಂದ ಪ್ರಕರಣ ನ್ಯಾಯಾಲಯ ತಲುಪಿದೆ. ಮೊದಲಿಗೆ ಪತಿ-ಪತ್ನಿ ಇಬ್ಬರಿಗೂ ಕೌನ್ಸೆಲಿಂಗ್ ನಡೆಸಲಾಯಿತು. ಆದರೆ ಇಬ್ಬರೂ ಆರೋಪ ಮಾಡುವುದನ್ನು ಬಿಡಲಿಲ್ಲ. ಇದೀಗ ವಿಚ್ಛೇದನ ಪಡೆಯದೇ ಎರಡನೇ ಮದುವೆಯಾಗಿದ್ದ ಪತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೆಂಡತಿಯನ್ನು ಬೆದರಿಸಲು ತಾನು ಮದುವೆಯಾಗಿದ್ದೇನೆ ಎಂದು ಆತ ಹೇಳಿದ್ದಾನೆ. ವಾಸ್ತವವಾಗಿ ಮದುವೆ ಆಗಿಲ್ಲ ಎನ್ನುವುದು ಆತನ ಹೇಳಿಕೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.
ವಕೀಲ ವಿಮಲೇಶ್ ನಿಗಮ್ ಮಾತನಾಡಿ, "ಕೌಟುಂಬಿಕ ನ್ಯಾಯಾಲಯದಲ್ಲಿ ಈಗ ಪತ್ನಿ ವಿನಿಮಯ, ಪತಿ ವಿನಿಮಯ ಪ್ರಕರಣಗಳು ಬರಲಾರಂಭಿಸಿವೆ. ಹೆಚ್ಚಿನ ಪ್ರಕರಣಗಳು ದೆಹಲಿ, ಮುಂಬೈ ಅಥವಾ ಬೆಂಗಳೂರಿಗೆ ಸಂಬಂಧಿಸಿದವು. ಗಂಡ ಮತ್ತು ಹೆಂಡತಿ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ಅಂತಹ ಪ್ರಕರಣಗಳು ಬಂದಾಗ ಮೊದಲು ಕೌನ್ಸಲಿಂಗ್ ಮಾಡಲಾಗುತ್ತದೆ. ವಿಷಯಗಳು ಕಾರ್ಯರೂಪಕ್ಕೆ ಬಾರದಿದ್ದಾಗ ವಿಚ್ಛೇದನದ ಪ್ರಕರಣ ನ್ಯಾಯಾಲಯಕ್ಕೆ ಹೋಗುತ್ತದೆ" ಎಂದರು.
ಇದನ್ನೂ ಓದಿ: ಬಾಗಲಕೋಟೆ: ಕಬ್ಬು ತುಂಬಿದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ, ನಾಲ್ವರು ಸಾವು