ಕುಲ್ತಾಳಿ (ಕೋಲ್ಕತ್ತಾ): ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸದ್ದಾಂ ಸರ್ದಾರ್ ಎಂಬ ದರೋಡೆಕೋರನನ್ನು ಪಶ್ಚಿಮ ಬಂಗಾಳ ಪೊಲೀಸರು ಹರಸಾಹಸದ ಬಳಿಕ ರಾಜ್ಯದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ನಕಲಿ ಚಿನ್ನದ ವಿಗ್ರಹ ಮಾರಾಟ, ಸಾರ್ವಜನಿಕರಿಂದ ಹಣ ವಸೂಲಿ, ಬಂದೂಕು ಕಳ್ಳಸಾಗಣೆ, ನಕಲಿ ಕರೆನ್ಸಿ ವಹಿವಾಟು ಸೇರಿ ಬಂಧಿತನ ಮೇಲೆ ಹಲವು ಪ್ರಕರಣಗಳಿವೆ. ವಿವಿಧ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದವು. ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ದಾಳಿ ನಡೆಸಿ ಪರಾರಿಯಾಗಿದ್ದನು. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಕರಣದ ಹಿನ್ನೆಲೆ: ವಂಚನೆಯನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಸದ್ದಾಂ, ನಕಲಿ ಚಿನ್ನದ ವಿಗ್ರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾರಾಟ ಮಾಡಿ, ಜನರಿಂದ ಹಣ ಪಡೆದು ವಸ್ತುಗಳನ್ನು ತಲುಪಿಸದೇ ಮೋಸ ಮಾಡುತ್ತಿದ್ದನು. ಈ ಬಗ್ಗೆ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ತನಿಖೆ ಕೈಗೊಂಡಿದ್ದ ಪೊಲೀಸರು ಸ್ಥಳೀಯ ಸಿಪಿಎಂ ನಾಯಕ ಮನ್ನನ್ ಖಾನ್ ಆಶ್ರಯ ಪಡೆದಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗೆ ಆಶ್ರಯ ನೀಡಿದ್ದ ಮನ್ನನ್ ಖಾನ್ ಅವರನ್ನೂ ಬಂಧಿಸಲಾಗಿದೆ.
ಇದೊಂದು ಏಳು - ಎಂಟು ಜನರಿರುವ ದೊಡ್ಡ ಜಾಲವಾಗಿತ್ತು. ಈ ಚಟುವಟಿಕೆಯಲ್ಲಿ ಮನ್ನನ್ ಖಾನ್ ಕೂಡ ಭಾಗಿಯಾಗಿದ್ದ. ಸದ್ದಾಂ ಎರಡು ದಿನಗಳ ಕಾಲ ಮನ್ನನ್ ಖಾನ್ ಅವರ ಅಲಘರ್ (ಮೀನುಗಾರಿಕೆ ಮೇಲ್ವಿಚಾರಣಾ ಮನೆ) ನಲ್ಲಿ ಆಶ್ರಯ ಪಡೆದಿದ್ದ. ಈ ಬಗ್ಗೆ ಸುಳಿವು ಸಿಕ್ಕ ತಕ್ಷಣ ದಾಳಿ ಮಾಡಿ ಬಂಧಿಸಿದ್ದೇವೆ. ದಾಳಿ ವೇಳೆ ಕೆಲವರು ತಲೆ ಮರೆಸಿಕೊಂಡಿದ್ದಾರೆ. ಅದರಲ್ಲಿ ಸದ್ದಾಂನ ಕಿರಿಯ ಸಹೋದರ ಸೈರುಲ್ ಕೂಡ ಇದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದೇವೆ. ದಾಳಿ ವೇಳೆ ಆರೋಪಿಗಳು ಪ್ರತಿರೋಧ ಮಾಡಿದ ಘಟನೆ ಕೂಡ ನಡೆಯಿತು. ಗುಂಪು ದಾಳಿಯಲ್ಲಿ ಕನಿಷ್ಠ ಮೂವರು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹುಡುಕಾಟದ ವೇಳೆ ರಹಸ್ಯ ಸುರಂಗ ಪತ್ತೆ!: ಆರೋಪಿ ಸದ್ದಾಂನನ್ನು ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ರಹಸ್ಯ ಸುರಂಗ ಇರುವುದು ಪತ್ತೆಯಾಗಿದೆ. ಈ ಮುನ್ನ ಬಂಧಿಸಲು ತೆರಳಿದ್ದಾಗ ಇದೇ ಸುರಂಗದ ಮೂಲಕ ಸದ್ದಾಂ ಪೊಲೀಸರಿಂದ ತಪ್ಪಿಕೊಂಡು ಪರಾರಿಯಾಗಿದ್ದನು. ಆತನ ಮನೆಯ ಮಲಗುವ ಕೋಣೆಯಲ್ಲಿನ ಹಾಸಿಗೆಯನ್ನು ಸರಿಸಿ ನೋಡಿದಾಗ ರಹಸ್ಯ ಸುರಂಗ ಮಾರ್ಗ ಇರುವುದು ಪತ್ತೆಯಾಗಿದೆ. ಇದು ಸುಂದರ್‌ಬನ್ಸ್‌ನಲ್ಲಿನ ಮಟ್ಲಾ ನದಿಗೆ ಹರಿಯುವ ಹತ್ತಿರದ ಕಾಲುವೆಗೆ ಸಂಪರ್ಕಿಸುತ್ತದೆ ಎಂದು ಹೇಳಲಾಗುತ್ತದೆ. ದರೋಡೆಕೋರನ ರಹಸ್ಯ ಸುರಂಗ ಮಾರ್ಗ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಈ ಅನುಮಾನದ ಹಿನ್ನೆಲೆ ಆತನ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಇದೀಗ ಬಂಧಿಸಿದ್ದಾರೆ.
15 ವರ್ಷಗಳಿಂದ ನಕಲಿ ಚಿನ್ನ ಮಾರಾಟ ದಂಧೆ: ಸದ್ದಾಂ ಕಳೆದ 15 ವರ್ಷಗಳಿಂದ ನಕಲಿ ಚಿನ್ನ ಮಾರಾಟ ದಂಧೆ ನಡೆಸುತ್ತಿದ್ದ ಎಂಬುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ನಕಲಿ ಚಿನ್ನದ ವಿಗ್ರಹಗಳ ಮಾರಾಟ ನಡೆಯುತ್ತಿತ್ತು. ಉದ್ಯಮಿಗಳೇ ಪ್ರಮುಖ ಗುರಿಯಾಗಿದ್ದರು. ಸದ್ದಾಂ ಮತ್ತು ಅವನ ಸಹಚರರು ಏಕಾಂತ ಸ್ಥಳಗಳಿಗೆ ಕರೆ ಮಾಡಿ, ನಕಲಿ ವಿಗ್ರಹಗಳನ್ನು ಬಳಸಿ ಅಥವಾ ಸರಳವಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು. ಸದ್ದಾಂ ವಿರುದ್ಧ 12 ಲಕ್ಷ ರೂಪಾಯಿ ವಂಚನೆ ಆರೋಪ ಸೇರಿ ಹಲವು ಪ್ರಕರಣಗಳಿವೆ. ಹರಸಾಹಸದ ಬಳಿಕ ಬುಧವಾರ ರಾತ್ರಿ ಸದ್ದಾಂ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ ₹2 ಕೋಟಿ ಸಾಲ ಪಡೆದ ಮೂವರ ಬಂಧನ - Fake Land Documents Case