ಅಗರ್ತಲಾ(ತ್ರಿಪುರ): ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿ, ದೇವಸ್ಥಾನಗಳನ್ನು ಹಾನಿಗೊಳಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಶನಿವಾರ ಢಾಕಾದಲ್ಲಿನ ಇಸ್ಕಾನ್ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ಬೆನ್ನಲ್ಲೇ, ತ್ರಿಪುರಾದಲ್ಲಿ ಬಾಂಗ್ಲನ್ನರಿಗೆ ಬಿಸಿ ಮುಟ್ಟಿಸಲಾಗಿದೆ. ಬಾಂಗ್ಲಾ ಗಡಿ ಹಂಚಿಕೊಂಡಿರುವ ತ್ರಿಪುರಾದಲ್ಲಿ ಬಾಂಗ್ಲಾದೇಶಿಯರಿಗೆ ಸೇವೆ ಒದಗಿಸದಿರಲು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘ ನಿರ್ಧರಿಸಿದೆ.
ಆಲ್ ತ್ರಿಪುರಾ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘವು (ATHROA) ಬಾಂಗ್ಲಾದೇಶದ ನಾಗರಿಕರಿಗೆ ಯಾವುದೇ ಸೇವೆಗಳನ್ನು ನೀಡದಿರಲು ನಿರ್ಧರಿಸಿದೆ. ಈ ಬಗ್ಗೆ ಡಿಸೆಂಬರ್ 2ರಂದು ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಈ ನಿರ್ಧಾರವನ್ನು ತಕ್ಷಣದಿಂದಲೇ ಜಾರಿ ಮಾಡಲಾಗುವುದು ಎಂದು ಸಂಘದ ಕಾರ್ಯದರ್ಶಿ ಭಾಸ್ಕರ್ ಚಕ್ರವರ್ತಿ ತಿಳಿಸಿದ್ದಾರೆ.
ಹಿಂದುಗಳ ಮೇಲಿನ ದಬ್ಬಾಳಿಕೆಗೆ ತಿರುಗೇಟು: ಇನ್ನು ಮುಂದೆ ಯಾವುದೇ ಬಾಂಗ್ಲನ್ನರಿಗೆ ತ್ರಿಪುರಾದಲ್ಲಿ ಸೇವೆ ಲಭ್ಯ ಇರುವುದಿಲ್ಲ. ತುರ್ತು ಮತ್ತು ವೈದ್ಯಕೀಯ ಅಗತ್ಯ ಇರುವವರಿಗೆ ಮಾತ್ರ ಅವಕಾಶ ನೀಡಲಾಗುವುದು. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ಇದು ನಮ್ಮ ಪ್ರತಿಕ್ರಿಯೆ ಎಂದು ಅವರು ಹೇಳಿದರು.
ಭಾರತವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ರಾಷ್ಟ್ರ. ಆದರೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಕಳವಳಕಾರಿ. ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ, ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ಕ್ರಮ ಆಕ್ಷೇಪಾರ್ಹ ಎಂದು ಸಂಘ ಹೇಳಿದೆ.
ತ್ರಿಪುರಾ ಹಿಂದಿನಿಂದಲೂ ಬಾಂಗ್ಲಾದೇಶದ ಜನರಿಗೆ ಆತಿಥ್ಯ ನೀಡುತ್ತಿದೆ. ಇತ್ತೀಚಿನ ಬೆಳವಣಿಗೆಗಳು ಸಹ್ಯವಾಗಿಲ್ಲ. ಹೋಟೆಲ್ ಮತ್ತು ರೆಸ್ಟೋರೆಂಟ್ ಸೇವೆಗಳ ಮೇಲಿನ ನಿರಾಕರಣೆ ರಾಜ್ಯಕ್ಕೆ ಭೇಟಿ ನೀಡುವ ಬಾಂಗ್ಲಾದ ಎಲ್ಲ ನಾಯಕರು, ನಾಗರಿಕರಿಗೂ ಅನ್ವಯಿಸುತ್ತದೆ. ಈ ನಿರ್ಬಂಧ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಸಂಘ ತಿಳಿಸಿದೆ.
ಢಾಕಾದಲ್ಲಿರುವ ದೇವಸ್ಥಾನಕ್ಕೆ ಬೆಂಕಿ: ಬಾಂಗ್ಲಾದ ಢಾಕಾದಲ್ಲಿನ ಹಿಂದು ದೇವಾಲಯಕ್ಕೆ ಮತಾಂಧರು ಶನಿವಾರ ಬೆಂಕಿ ಹಚ್ಚಿದ್ದಾರೆ. ಇದರಿಂದ ದೇವರ ವಿಗ್ರಹಗಳು ಸುಟ್ಟು ಹೋಗಿವೆ. ಇಸ್ಕಾನ್‌ಗೆ ಸೇರಿದ ಲಕ್ಷ್ಮೀ ನಾರಾಯಣ ಮಂದಿರವನ್ನು ಸುಟ್ಟು ಹಾಕಲಾಗಿದೆ ಎಂದು ಬಾಂಗ್ಲಾ ಮತ್ತು ಕೋಲ್ಕತ್ತಾದ ಇಸ್ಕಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದರೂ, ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿನ ಇಸ್ಕಾನ್ ಟೆಂಪಲ್ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು, ವಿಗ್ರಹಕ್ಕೆ ಹಾನಿ