ಬರಾಸತ್ (ಪಶ್ಚಿಮಬಂಗಾಳ): ಸಂದೇಶ್ಖಾಲಿಯಲ್ಲಿ ಟಿಎಂಸಿ ನಾಯಕರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಆರೋಪ ಮಾಡಿರುವ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು (ಬುಧವಾರ) ಭೇಟಿ ಮಾಡಿದರು. ತಮಗೆ ಕಿರುಕುಳ ನೀಡಲಾಗಿದ್ದು, ನ್ಯಾಯ ಒದಗಿಸಿ ಎಂದು ಪ್ರಧಾನಿ ಬಳಿ ಮೊರೆಯಿಟ್ಟಿದ್ದಾರೆ.
ನೀರೊಳಗಿನ ಮೆಟ್ರೋ ಮಾರ್ಗಕ್ಕೆ ಚಾಲನೆ, ಉತ್ತರ 24 ಪರಗಣ ಜಿಲ್ಲೆಯ ಬರಾಸತ್‌ನಲ್ಲಿ ಸಾರ್ವಜನಿಕ ರ್ಯಾಲಿಯ ನಂತರ ಪ್ರಧಾನಿ ಮೋದಿ ಅವರನ್ನು ಮಹಿಳೆಯರು ಭೇಟಿಯಾದರು ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಗ್ನಿಮಿತ್ರ ಪೌಲ್ ತಿಳಿಸಿದರು.
ಟಿಎಂಸಿ ನಾಯಕ ಷಹಜಹಾನ್ ಶೇಖ್ ಮತ್ತಿತರರು ತಮ್ಮನ್ನು ಅಮಾನುಷವಾಗಿ ನಡೆಸಿಕೊಂಡಿದ್ದಾರೆ. ಜೊತೆಗೆ ಇನ್ನಷ್ಟು ಜನರ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಮಗಾಗಿರುವ ಅನ್ಯಾಯಕ್ಕೆ ನ್ಯಾಯ ಧಕ್ಕಿಸಿಕೊಡಿ ಎಂದು ಬೇಡಿಕೊಂಡಿದ್ದಾರೆ. ಇದನ್ನು ಪ್ರಧಾನಿ ಮೋದಿ ಅವರು ಶಾಂತಚಿತ್ತದಿಂದಲೇ ಆಲಿಸಿ, ಮರುಗಿದರು. ಬಳಿಕ ನೆರವು ನೀಡುವ ಭರವಸೆ ನೀಡಿದರು ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ತಮ್ಮ ಅಹವಾಲನ್ನು ಆಲಿಸಿದ್ದಕ್ಕೆ ಮಹಿಳೆಯರೂ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ನ್ಯಾಯ ದೊರಕುವ ಭರವಸೆ ಅವರಲ್ಲಿ ಮೂಡಿದೆ. ಮಹಿಳೆಯರಿಗೆ ನ್ಯಾಯ ಸಿಗಲು ಪಕ್ಷ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಟಿಎಂಸಿ ವಿರುದ್ಧ ಗುಡುಗಿದ ಮೋದಿ, ಮಹಿಳೆಯರ ಮೇಲಿನ ದೌರ್ಜನ್ಯದ ಈ ಚಂಡಮಾರುತ ಪಶ್ಚಿಮ ಬಂಗಾಳವನ್ನೇ ಸುತ್ತಿಕೊಳ್ಳಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾರಿ ಶಕ್ತಿಯ ಮುಂದೆ ಟಿಎಂಸಿ ನಾಶವಾಗಲಿದೆ ಎಂದು ಗುಡುಗಿದರು.
ಆರೋಪಿಗಳ ಆಸ್ತಿ ಜಪ್ತಿ: ಸಂದೇಶ್ಖಾಲಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ನಾಯಕ ಷಹಜಹಾನ್ ಶೇಖ್ ಮತ್ತು ಇತರರ ವಿರುದ್ಧದ ತನಿಖೆಯಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯಡಿ ₹12.78 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಜಪ್ತಿ ಮಾಡಿದೆ. ಇದೇ ವೇಳೆ, ಪ್ರಕರಣವನ್ನು ಕೋಲ್ಕತ್ತಾ ಹೈಕೋರ್ಟ್ ಸಿಬಿಐಗೆ ನೀಡಿದ್ದರ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿದೆ.
ಸಂದೇಶ್ಖಾಲಿ ಗಲಭೆ, ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಅಪಾರ್ಟ್ಮೆಂಟ್, ಕೃಷಿ ಭೂಮಿ, ಮೀನುಗಾರಿಕೆಗೆ ಭೂಮಿ, ಇತರ ಜಮೀನು ಮತ್ತು 14 ಸ್ಥಿರ ಆಸ್ತಿಗಳು ಸೇರಿ ಒಟ್ಟು 12.78 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ. ವಿವಿಧ ಬ್ಯಾಂಕ್ ಖಾತೆಗಳನ್ನೂ ನಿರ್ಬಂಧಿಸಲಾಗಿದೆ ಎಂದು ಇಡಿ ತಿಳಿಸಿದೆ.
ಇದನ್ನೂ ಓದಿ: ಸಂದೇಶ್ಖಾಲಿ ಹಿಂಸಾಚಾರ: ಆರೋಪಿಗಳ ₹12 ಕೋಟಿ ಮೌಲ್ಯದ ಆಸ್ತಿ ಜಪ್ತಿ, ವಿಚಾರಣೆಗೆ ಒಪ್ಪಿದ ಸುಪ್ರೀಂ