ಕಂಧಮಾಲ್: ಒಡಿಶಾ ರಾಜ್ಯದ ಕಂಧಮಾಲ್ ಜಿಲ್ಲೆಯ ಬಲಿಗುಡಾದ ಕಾಕರ್ಪುವಾ ಪ್ರದೇಶದಲ್ಲಿ ಯೋಧರು ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ದಾಳಿಯಲ್ಲಿ ಪ್ರಮುಖ ಮಾವೋವಾದಿ ನಾಯಕನನ್ನು ಹತ್ಯೆ ಮಾಡಲಾಗಿದೆ. ಮೃತ ಮಾವೋವಾದಿಯನ್ನು ಕಂಧಮಾಲ್-ಕಲಹಂಡಿ-ಬೌಧ್-ನಯಾಗಢ (ಕೆಕೆಬಿಎನ್) ವಿಭಾಗದ ವಿಭಾಗೀಯ ಸಮಿತಿ ಸದಸ್ಯ ದಸ್ರು ಎಂದು ಗುರುತಿಸಲಾಗಿದೆ.
ಜಿಲ್ಲಾ ಸ್ವಯಂಸೇವಾ ಪಡೆಯ (ಡಿವಿಎಫ್) ಯೋಧನಿಗೆ ಗುಂಡು ತಗುಲಿದ್ದು ಗಂಭೀರ ಗಾಯಗಳಾಗಿವೆ. ಜಿತೇಂದ್ರ ನಾಹಕ್ ಗಂಭೀರವಾಗಿ ಗಾಯಗೊಂಡಿರುವ ಡಿವಿಎಫ್ ಜವಾನ ಎಂದು ಗುರುತಿಸಲಾಗಿದೆ. ಫೆ.3ರಂದು ಸಂಜೆ ಕಾಕೆರ್ಪುವಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಭದ್ರತಾ ಸಿಬ್ಬಂದಿಯನ್ನು ನೋಡಿದ ಮಾವೋವಾದಿಗಳು ಗುಂಡು ಹಾರಿಸಿದ್ದಾರೆ. ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು. ನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಉನ್ನತ ಮಾವೋವಾದಿ ನಾಯಕ ದಸ್ರುವಿನ ಮೃತದೇಹ ಪತ್ತೆಯಾಗಿದೆ.
ದಸ್ರು ಛತ್ತೀಸ್‌ಗಢ ಮೂಲದವ. ಈ ನಕ್ಸಲೀಯರ ನಾಯಕನ ತಲೆಗೆ 5 ಲಕ್ಷ ರೂ ಬಹುಮಾನ ಘೋಷಣೆ ಮಾಡಲಾಗಿತ್ತು. ಈತ ಅನೇಕ ಜನರ ಹತ್ಯೆ, ಭದ್ರತಾ ಪಡೆಗಳ ಮೇಲಿನ ದಾಳಿ ಮತ್ತು ಸ್ಫೋಟಕ ಪ್ರಕರಣಗಳ ಘಟನೆಗಳಲ್ಲಿ ಭಾಗಿಯಾಗಿದ್ದನು. ಕಂಧಮಾಲ್ ಮತ್ತು ಬೌದ್ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾವೋವಾದಿ ಡೇವಿಡ್ ನಂತರ ದಸ್ರು ಕೆಕೆಬಿಎನ್ ಜಿಲ್ಲಾ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡಿದ್ದನು. ಛತ್ತೀಸ್‌ಗಢ ಪೊಲೀಸರು, ಆಂಧ್ರ ಮತ್ತು ತೆಲಂಗಾಣ ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ. 2017ರಲ್ಲಿ, ಕೆಕೆಬಿಎನ್ ಮಾವೋವಾದಿ ಸಂಘಟನೆಯ ಮುಖ್ಯಸ್ಥ ಜಂಪನಾ ಮತ್ತು ಅವರ ಪತ್ನಿ ಶರಣಾಗಿದ್ದರು. ತದನಂತರ, ಸಂಘಟನೆಯ ಮುಖ್ಯಸ್ಥ ಡೇವಿಡ್ನನ್ನು 2018ರಲ್ಲಿ ಮಾವೋ ವಿರೋಧಿ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿತ್ತು. ದಸ್ರು ಕೆಕೆಬಿಎನ್ನ ಜಿಲ್ಲಾ ಕಮಾಂಡ್ ಸದಸ್ಯನಾಗಿ ಅಧಿಕಾರ ವಹಿಸಿಕೊಂಡಿದ್ದನು. ಈತ ಕಂಧಮಾಲ್ ಪ್ರದೇಶದಲ್ಲಿ ಸಕ್ರಿಯರಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢ: ಇಬ್ಬರು ಮಹಿಳಾ ನಕ್ಸಲರ ಹತ್ಯೆ