ಚೆನ್ನೈ: ತಮಿಳುನಾಡಿನ ವಿರುಧನಗರ ಜಿಲ್ಲೆಯ ಶಿವಕಾಶಿ ಸಮೀಪದ ಪಟಾಕಿ ಕಾರ್ಖಾನೆಯೊಂದರಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ವಿರುಧನಗರ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವಿರುಧನಗರ ಜಿಲ್ಲಾಧಿಕಾರಿ ಜಯಸೇಲನ್ ತಿಳಿಸಿದ್ದಾರೆ.
ವಿರುಧನಗರ ಸಮೀಪದ ಚೆಂಗಮಲಪಟ್ಟಿ ಗ್ರಾಮದ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
''ಖಾಸಗಿ ಒಡೆತನದ ಪಟಾಕಿ ಕಾರ್ಖಾನೆಯಲ್ಲಿ ಇಂದು ಸಂಭವಿಸಿದ ಅನಿರೀಕ್ಷಿತ ಸ್ಫೋಟದಲ್ಲಿ 5 ಮಹಿಳೆಯರು ಮತ್ತು 3 ಪುರುಷರು ಸೇರಿದಂತೆ 9 ಕಾರ್ಮಿಕರು ಸಾವನ್ನಪ್ಪಿದ ದುರಂತ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ'' ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ.
''ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಮತ್ತು ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ಮೃತರ ಕುಟುಂಬಗಳಿಗೆ ಮತ್ತು ಅವರ ಸಂಬಂಧಿಕರಿಗೆ ನನ್ನ ಸಂತಾಪ ಅರ್ಪಿಸುವೆ. ಸಂತ್ರಸ್ತರಿಗೆ ಅಗತ್ಯವಿರುವ ಪರಿಹಾರದ ನೆರವನ್ನು ಚುನಾವಣಾ ಆಯೋಗದ ಅನುಮೋದನೆಯೊಂದಿಗೆ ಸರ್ಕಾರದ ವತಿಯಿಂದ ನೀಡಲಾಗುವುದು'' ಎಂದು ಸಿಎಂ ಸ್ಟಾಲಿನ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಪಟಾಕಿ ಕಾರ್ಖಾನೆಗೆ ಬೆಂಕಿ; ಏಳು ಮಂದಿ ಸಾವು, ಅನೇಕರಿಗೆ ಗಾಯ