ಕೋಲ್ಕತ್ತಾ(ಪಶ್ಚಿಮ ಬಂಗಾಳ): ಮುಂಬರುವ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ ಎಲ್ಲ 42 ಕ್ಷೇತ್ರಗಳಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮಾಜಿ ಕ್ರಿಕೆಟಿಗರಾದ ಕೀರ್ತಿ ಆಜಾದ್, ಯೂಸುಫ್ ಪಠಾಣ್ ಸೇರಿದಂತೆ ಅನೇಕ ಹೊಸ ಮುಖಗಳಿಗೆ ಸಿಎಂ ಮಮತಾ ಬ್ಯಾನರ್ಜಿ ಮಣೆ ಹಾಕಿದ್ದಾರೆ.
ಕೋಲ್ಕತ್ತಾದ ಬ್ರಿಗೇಡ್ ಪಾರದ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಪಕ್ಷದ ಬೃಹತ್ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ, ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಘೋಷಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಯಿತು. 16 ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ. 12 ಮಹಿಳೆಯರಿಗೂ ಅವಕಾಶ ಸಿಕ್ಕಿದೆ.
ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗು ಹಾಲಿ ಸಂಸದ ಅಧೀರ್ ರಂಜನ್ ಚೌಧರಿ ಪ್ರತಿನಿಧಿಸುವ ಬಹರಮ್ಪುರ ಕ್ಷೇತ್ರದಿಂದ ಕಣಕ್ಕಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮತ್ತೊಂದೆಡೆ, 1983ರ ಭಾರತದ ವಿಶ್ವಕಪ್ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಕೀರ್ತಿ ಆಜಾದ್ ಅವರಿಗೆ ಬರ್ಧಮಾನ್-ದುರ್ಗಪುರ್ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಮಹುವಾ ಮೊಯಿತ್ರಾಗೂ ಟಿಕೆಟ್: ಇದೇ ವೇಳೆ, ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಗಂಭೀರ ಆರೋಪದ ಮೇಲೆ ಸಂಸದ ಸ್ಥಾನವನ್ನು ಕಳೆದುಕೊಂಡಿದ್ದ ಮಹುವಾ ಮೊಯಿತ್ರಾ ಅವರಿಗೂ ಈ ಬಾರಿ ಟಿಕೆಟ್ ಘೋಷಿಸಲಾಗಿದೆ. ಈ ಹಿಂದೆ ಪ್ರತಿನಿಧಿಸುತ್ತಿದ್ದ ಕೃಷ್ಣನಗರ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಮಹುವಾ ಸ್ಪರ್ಧಿಸಲಿದ್ದಾರೆ. ಹಿರಿಯ ನಟ ಶತ್ರುಘ್ನ ಸಿನ್ಹಾ ಅವರಿಗೆ ಅಸನ್ಸೋಲ್ ಕ್ಷೇತ್ರದಿಂದ ಮತ್ತೊಮ್ಮೆ ಟಿಕೆಟ್ ನೀಡಲಾಗಿದೆ.
ನಟಿ, ಹಾಲಿ ಸಂಸದೆ ನುಸ್ರತ್ ಜಹಾನ್ ಅವರನ್ನು ಟಿಎಂಸಿ ಕೈ ಬಿಟ್ಟಿದೆ. ಬಸಿರಹತ್ ಕ್ಷೇತ್ರವನ್ನು ನುಸ್ರತ್ ಪ್ರತಿನಿಧಿಸುತ್ತಿದ್ದರು. ಆದರೆ, ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಸಂದೇಶ್ಖಾಲಿ ಪ್ರದೇಶವೂ ಬರುತ್ತದೆ. ಹಾಗಾಗಿ, ಕ್ಷೇತ್ರದಿಂದ ಮಾಜಿ ಸಂಸದ ಹಾಜಿ ನೂರುಲ್ ಇಸ್ಲಾಂ ಅವರನ್ನು ಟಿಕೆಟ್ ಕೊಡಲಾಗಿದೆ.
ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ: ಎಲ್ಲ 42 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸುವ ಮೂಲಕ ಟಿಎಂಸಿ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಹೊರಬಂದಿದೆ. ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಹೆಸರಲ್ಲಿ ಎಲ್ಲ ಪ್ರತಿಪಕ್ಷಗಳು ಬಿಜೆಪಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದವು. ದೆಹಲಿ, ತಮಿಳುನಾಡು, ಬಿಹಾರದಲ್ಲಿ ಮೈತ್ರಿ ಫಲಪ್ರದವಾಗಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿ ಸ್ಪರ್ಧೆಯಿಂದ ಮೈತ್ರಿ ಮುರಿದು ಬಿದ್ದಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಸೀಟು ಹಂಚಿಕೆ ಯಶಸ್ವಿ: ಕಾಂಗ್ರೆಸ್ 9, ಡಿಎಂಕೆ 21 ರಲ್ಲಿ ಸ್ಪರ್ಧೆ