ಮಳೆ ಬರುವ ಮುನ್ನವೇ ಆಗಸದಲ್ಲಿ ಗುಡುಗು, ಮಿಂಚು ಆರ್ಭಟಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಸಿಡಿಲಾಘಾತ ಭಾರೀ ಪ್ರಾಣಹಾನಿ ಉಂಟುಮಾಡುತ್ತದೆ. ಆದರೆ ಪ್ರಾಣಿಗಳ ಪೈಕಿ ಜಿರಾಫೆಗಳು ಮನುಷ್ಯರಿಗಿಂತಲೂ ಹೆಚ್ಚು ಈ ಗುಡುಗು-ಮಿಂಚಿನ ರುದ್ರ ನರ್ತನಕ್ಕೆ ಗುರಿಯಾಗುತ್ತವೆ ಎಂಬುದು ನಿಮಗೆ ತಿಳಿದಿದೆಯೇ?.
ಸಿಡಿಲು ಹೊಡೆಯುವುದು ಹೇಗೆ?: ಮೋಡದಲ್ಲಿ ನೀರಿನ ಅಂಶವಿರುವುದು ಗೊತ್ತಿರುವ ವಿಚಾರವೇ. ಆದರೆ ಇದೇ ಮೋಡ ಆಗಸದೆತ್ತರ ಚಲಿಸಿದಂತೆ ತಾಪ ಕಡಿಮೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀರಿನ ಕಣಗಳು ಮತ್ತಷ್ಟು ಮೇಲಕ್ಕೆ ಹೋಗುತ್ತವೆ. ಹೀಗೆ ತಾಪಮಾನ ಶೂನ್ಯ ಡಿಗ್ರಿಗಿಂತಲೂ ಕಡಿಮೆಯಾಗುತ್ತಿದ್ದಂತೆ ನೀರಿನ ಕಣಗಳು ಸಣ್ಣ ಮಂಜುಗಡ್ಡೆ ರೂಪ ಪಡೆಯುತ್ತವೆ. ಈ ಮಂಜುಗಡ್ಡೆಯ ಗಾತ್ರ ಹೆಚ್ಚಾಗಿ ಭೂಮಿಗೆ ಅಪ್ಪಳಿಸಲು ಆರಂಭವಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಸಣ್ಣ ಮಂಜುಗಡ್ಡೆ ಕಣಗಳು ಮೇಲಕ್ಕೆ ಹೋಗುತ್ತಾ ದೊಡ್ಡ ಮಂಜುಗಡ್ಡೆ ಕಣಗಳು ಕೆಳಗೆ ಬೀಳುತ್ತವೆ. ಇದರಿಂದಾಗಿ ಒಂದಕ್ಕೊಂದು ಸಂಘರ್ಷ ಏರ್ಪಟ್ಟು, ಎಲೆಕ್ಟ್ರಾನ್ಗಳು ಬಿಡುಗಡೆ ಆಗುತ್ತವೆ. ಹೀಗೆ ಸಂಚರಿಸುವ ಎಲೆಕ್ಟ್ರಾನ್ಗಳ ಕಾರಣದಿಂದ ಹೆಚ್ಚು ಘರ್ಷಣೆ ನಡೆದು ಸರಣಿ ಪ್ರತಿಕ್ರಿಯೆಗಳು ಏರ್ಪಡುತ್ತವೆ.
ಇದೇ ಕಾರಣದಿಂದ ಮೋಡದ ಮೇಲಿನ ಪದರ ಪಾಸಿಟಿವ್ ಚಾರ್ಜ್ ಆದರೆ, ಮಧ್ಯ ಪದರ ನೆಗೆಟಿವ್ ಚಾರ್ಜ್ ಆಗುತ್ತದೆ. ಎರಡು ಪದರಗಳ ವಿದ್ಯುತ್ ಶಕ್ತಿಯ ವ್ಯತ್ಯಾಸ ದೊಡ್ಡದಾಗಿರುತ್ತದೆ. ಅಂದರೆ, ಇದು ಸುಮಾರು ಒಂದು ಬಿಲಿಯನ್ನಿಂದ 10 ಬಿಲಿಯನ್ ತನಕವೂ ಆಗಿರಬಹುದು. ಸಣ್ಣ ಅವಧಿಯಲ್ಲಿ ಬಹಳ ದೊಡ್ಡ ಪ್ರಮಾಣದ ಅಂದರೆ ಸುಮಾರು 100,000ದಿಂದ ಮಿಲಿಯನ್ನಷ್ಟು ಆ್ಯಂಪಿಯರ್ಸ್ ವಿದ್ಯುತ್ ಈ ಪದರಗಳ ಮಧ್ಯೆ ಸಂಚರಿಸುತ್ತದೆ.
ಆಗ ದೊಡ್ಡ ಪ್ರಮಾಣದಲ್ಲಿ ತಾಪ ಉತ್ಪಾದನೆಯಾಗುತ್ತದೆ. ಮೋಡದ ಎರಡೂ ಪದರಗಳ ನಡುವಿನ ಗಾಳಿಯನ್ನು ಇದು ಬಿಸಿ ಮಾಡುತ್ತದೆ. ಇದರಿಂದಾಗಿ ಮಿಂಚು ಬರುವ ಸಂದರ್ಭದಲ್ಲಿ ಆ ಪದರದಲ್ಲಿ ಕೆಂಪು ಬಣ್ಣ ಉಂಟಾಗುತ್ತದೆ. ಹೀಗೆ ಅತಿ ಬಿಸಿ ಹೊಂದಿರುವ ಗಾಳಿಯ ಪದರ ವಿಶಾಲವಾಗುತ್ತಾ ಆಘಾತಕಾರಿ ತರಂಗಗಳನ್ನು ಉತ್ಪಾದಿಸುತ್ತದೆ. ಅದರಿಂದ ನಮಗೆ ಗುಡುಗು ಕೇಳಿಸುತ್ತದೆ. ಸಿಡಿಲು ಎಂಬುದು ಬೃಹತ್ ಆಕಾರದ (ಸುಮಾರು 10-12 ಕಿ.ಮೀ ಉದ್ದವಿರುವ) ಮೋಡದಿಂದ ಉಂಟಾಗುತ್ತದೆ. ವಿಶೇಷವೆಂದರೆ, ಮೋಡದ ಮೂಲ ಅಥವಾ ತಳ ಭೂಮಿಯ ಮಟ್ಟದಿಂದ ಕೇವಲ 1-2 ಕಿ.ಮೀ. ಅಳತೆಯಲ್ಲಿ ಇರುತ್ತದೆ.
ಸಿಡಿಲಿನಿಂದ ಜಿರಾಫೆಗಳಿಗೆ ಹೆಚ್ಚು ಹಾನಿ: ಗುಡುಗು, ಮಿಂಚು ಪ್ರಕೃತಿಯ ಸಹಜ ಪ್ರಕ್ರಿಯೆ. ಸಿಡಿಲುಗಳ ಹೊಡೆತಕ್ಕೆ ಹಲವು ಬಾರಿ ಪ್ರಾಣಿಗಳು ಸಾಯುತ್ತವೆ. ಕೆಲ ವರ್ಷಗಳ ಹಿಂದೆ ಅಸ್ಸಾಂನಲ್ಲಿ ಸಿಡಿಲು ಬಡಿದು 18 ಆನೆಗಳು ಸಾವನ್ನಪ್ಪಿದ್ದವು. ಆದರೆ ಯಾವುದೇ ಜೀವಿ ಮಿಂಚಿನಿಂದ ಅತಿ ಹೆಚ್ಚು ಅಪಾಯಕ್ಕೆ ಒಳಗಾಗಿದೆ ಅಂದರೆ ಅದು ಜಿರಾಫೆ. ಹೌದು, ಇದಕ್ಕೆ ಕಾರಣ ಅದರ ಎತ್ತರ ಮತ್ತು ತಲೆಯ ಮೇಲಿನ ಕೊಂಬುಗಳು ಎನ್ನುತ್ತಾರೆ ತಜ್ಞರು.
ಜಿರಾಫೆಗಳು ಮಿಂಚಿನಿಂದ ಸಾಯುವ ಸಾಧ್ಯತೆ ಮನುಷ್ಯರಿಗಿಂತ 30 ಪಟ್ಟು ಹೆಚ್ಚು ಎಂದು ಸಂಶೋಧನೆ ಹೇಳುತ್ತದೆ. ಮಳೆ ಬಿದ್ದ ಸಮಯದಲ್ಲಿ ಪ್ರಾಣಿಗಳು ಗುಂಪುಗುಂಪುಗಳಾಗಿ ಹೊರಗಿರುತ್ತವೆ. ಅವು ಬೇಲಿಯ ಸಮೀಪದಲ್ಲಿದ್ದಾಗ ವಿದ್ಯುತ್ ಪ್ರವಹಿಸುವ ಬೇಲಿಯಿಂದ ಹಾದು ಹೋಗುವ ಸಾಧ್ಯತೆಯಿದ್ದು, ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ತಜ್ಞರು.
ಜೂನ್ 21 ವಿಶ್ವ ಜಿರಾಫೆ ದಿನ. ಈ ವೇಳೆ ಮಳೆ, ಗುಡುಗು ಸಿಡಿಲು ಹೆಚ್ಚು. ಆದರೆ ಜಿರಾಫೆಗಳು ತಮ್ಮ ಎತ್ತರದ ಕಾರಣದಿಂದ ಮಿಂಚುಗಳಿಗೆ ಗುರಿಯಾಗುತ್ತವೆ. ವಯಸ್ಕ ಜಿರಾಫೆಗಳು ಸಾಮಾನ್ಯವಾಗಿ 15ರಿಂದ 19 ಅಡಿ ಎತ್ತರ ಹೊಂದಿರುತ್ತವೆ. ಅತಿ ಎತ್ತರದ ವಸ್ತುಗಳ ಮೇಲೆ ಮಿಂಚು ಬೇಗ ಅಪ್ಪಳಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಜಿರಾಫೆಗಳು ಇತರ ಪ್ರಾಣಿಗಳಿಗಿಂತ ಎತ್ತರವಾಗಿರುತ್ತವೆ. ಆದ್ದರಿಂದ ಅವು ಮಿಂಚಿಗೆ ಬಲಿಯಾಗುವ ಅಪಾಯ ಹೆಚ್ಚಾಗಿದೆ.
ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮೋಸ್ಪೆರಿಕ್ ಅಡ್ಮಿನಸ್ಟ್ರೇಷನ್ ಪ್ರಕಾರ, 2003 ಮತ್ತು 2019ರಲ್ಲಿ ಜಿರಾಫೆಗಳು ಮಿಂಚಿನಿಂದ ಸಾವನ್ನಪ್ಪಿರುವುದು ಹೆಚ್ಚೆಂದು ಕಂಡುಬಂದಿದೆ. ಅಮೆರಿಕದ ಟ್ಯಾಂಪಾ ಮತ್ತು ಒರ್ಲ್ಯಾಂಡೊ ನಡುವೆ ಹೆಚ್ಚು ಮಿಂಚಿನ ಹೊಡೆತಗಳು ಸಂಭವಿಸುತ್ತವೆ. 2010ರಲ್ಲಿ ದಕ್ಷಿಣ ಆಫ್ರಿಕಾದ ಮೀಸಲು ಪ್ರದೇಶದಲ್ಲಿ ಜಿರಾಫೆಯೊಂದು ಸಿಡಿಲು ಬಡಿದು ಸಾವನ್ನಪ್ಪಿತ್ತು.
ಮಿಂಚು ನೇರವಾಗಿ ಹೊಡೆಯುವುದರಿಂದ ಪ್ರಾಣಿಗಳ ಸಾವಿಗೆ ಕಾರಣವಾಗುವುದಿಲ್ಲ. ಮೂರು ಮಾರ್ಗಗಳ ವಿಧಾನಗಳಲ್ಲಿ ಪ್ರಾಣಿಗಳು ಸಾಯುತ್ತವೆ. ಮೊದಲನೆಯದು- ಸೈಡ್ ಫ್ಲ್ಯಾಷ್ ಅಂದರೆ ಪಕ್ಕದಿಂದ ಮಿಂಚು ಪ್ರಾಣಿಗೆ ಬಡಿದಾಗ, ಅದು ಕೂಡ ಬೇರೆ ಯಾವುದನ್ನಾದರೂ ಹೊಡೆದ ನಂತರ. ಎರಡನೆಯದು ಪೊಟೆನ್ಶಿಯಲ್ ಎಂದರೆ ಎಲ್ಲೋ ಸಿಡಿಲು ಬಡಿದಾಗ ಮತ್ತು ಅದರಿಂದ ಹರಡುವ ವಿದ್ಯುತ್ನಿಂದ ಸಾವಿಗೆ ಕಾರಣವಾಗುತ್ತದೆ. ಮೂರನೇ ಹಂತವು ವಿರಳವಾಗಿದೆ, ಅಂದರೆ ಮಿಂಚಿನಿಂದಾಗಿ ವಿದ್ಯುತ್ ಪ್ರವಾಹ ನೆಲದಾದ್ಯಂತ ಹರಡುತ್ತದೆ. ಆಗ ಪ್ರಾಣಿ ಸಾಯುತ್ತದೆ.
2016ರಲ್ಲಿ, ಮಿಂಚಿನಿಂದ ಉಂಟಾದ ವಿದ್ಯುತ್ ಪ್ರವಾಹದಿಂದಾಗಿ ನಾರ್ವೆಯಲ್ಲಿ 300ಕ್ಕೂ ಹೆಚ್ಚು ಹಿಮಸಾರಂಗಗಳು ಸತ್ತಿದ್ದವು. ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೌತಶಾಸ್ತ್ರಜ್ಞ ಹಮೀದ್ ರಸೂಲ್, ಆಕಾಶದಿಂದ ಭೂಮಿಗೆ ಬೀಳುವ ಮಿಂಚು ಶೇಕಡಾ 27ರಷ್ಟು ಕಡಿಮೆ ಎತ್ತರದ ವಸ್ತುಗಳ ಮೇಲೆ ಅಪ್ಪಳಿಸುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಮರಗಳು ಮತ್ತು ಪ್ರಾಣಿಗಳ ಮೇಲೆ ಧನಾತ್ಮಕ ಆವೇಶವಿದ್ದು, ಅದು ಮಿಂಚನ್ನು ತನ್ನೆಡೆಗೆ ಆಕರ್ಷಿಸುತ್ತದೆ ಎಂಬುದು ರಸೂಲ್ ನೀಡುವ ಕಾರಣವಾಗಿದೆ.
ಇದನ್ನೂ ಓದಿ: ಗಂಭೀರ ಪ್ರಮಾಣದ ನರಗಳ ಸೆಳೆತದಿಂದಲೂ ರಕ್ತದ ಹೆಪ್ಪುಗಟ್ಟುವಿಕೆ ಅಪಾಯವಿದೆ! - The risk of blood clots