ಹೈದರಾಬಾದ್(ತೆಲಂಗಾಣ): ಈ ಬಾರಿಯ ಲೋಕಸಭಾ ಚುನಾವಣೆ ವೋಟ್ ಫಾರ್ ಜಿಹಾದ್ ಮತ್ತು ವೋಟ್ ಫಾರ್ ಡೆವಲಪ್‌ಮೆಂಟ್ ನಡುವಿನ ಹೋರಾಟವಾಗಿದೆ. ಇದರಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ಸರ್ಕಾರ ರಚನೆ ಮಾಡಿ, ದೇಶ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ಅಮಿತ್ ಶಾ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯ ನೀತಿಗಳನ್ನು ತಿರುಚುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಾರಿಯ ಸಾರ್ವತ್ರಿಕ ಚುನಾವಣೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಚುನಾವಣೆ, ಕುಟುಂಬದ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿ ನಡುವಿನ ಹೋರಾಟ, ಅಭಿವೃದ್ಧಿ ಪರ ಮತ್ತು ಜಿಹಾದ್ ಪರದ ಸೆಣಸಾಟ ಎಂದು ವ್ಯಾಖ್ಯಾನಿಸಿದರು.
ಕಾಂಗ್ರೆಸ್ ವಿರುದ್ಧ ಟೀಕೆ: ಮೋದಿ ಗ್ಯಾರಂಟಿಗಳ ಮೇಲೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಕೈ ಪಕ್ಷದಿಂದ ಮತಗಳ ಧ್ರುವೀಕರಣ ಮತ್ತು ಓಲೈಕೆ ರಾಜಕಾರಣ ನಡೆಯುತ್ತಿದೆ ಎಂದು ಟೀಕಿಸಿದರು.
ಮೂರು ಹಂತದ ಮತದಾನದಲ್ಲಿ ಈಗಾಗಲೇ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ದೇಶಾದ್ಯಂತ ಒಟ್ಟು 400 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಮೀಸಲಾತಿ ಬಗ್ಗೆ ಸುಳ್ಳು ಪ್ರಚಾರ: ಕಾಂಗ್ರೆಸ್ ಮೀಸಲಾತಿ ಕುರಿತು ಸುಳ್ಳು ಪ್ರಚಾರ ಮಾಡುತ್ತಿದೆ. ಈ ಮೂಲಕ ಚುನಾವಣೆ ಗೆಲ್ಲಲು ಯತ್ನಿಸುತ್ತಿದೆ. ಮತ್ತೊಮ್ಮೆ ಮೋದಿ ಸರ್ಕಾರ ಬಂದರೆ ಮೀಸಲಾತಿ ತೆಗೆಯುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮುಸ್ಲಿಮರಿಗೆ ಇರುವ ಶೇ.4ರಷ್ಟು ಮೀಸಲಾತಿಯಿಂದ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ತೊಂದರೆಯಾಗಲಿದೆ. ಆ ಮೀಸಲಾತಿ ರದ್ದುಪಡಿಸಿ ಅದನ್ನು ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ನೀಡಲಾಗುವುದು. ಇದು ಮೋದಿ ಗ್ಯಾರಂಟಿ ಎಂದು ಅಮಿತ್ ಶಾ ಹೇಳಿದರು.
ತೆಲಂಗಾಣದಲ್ಲಿ 10 ಸ್ಥಾನ ನೀಡಿದರೆ, ದೇಶದಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುತ್ತೇವೆ. 2019 ರ ಚುನಾವಣೆಯಲ್ಲಿ 4 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ್ದೀರಿ. ಈ ಬಾರಿ 10ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿಕೊಡಿ. ಈ ಎರಡಂಕಿಯು ದೇಶದಲ್ಲಿ 400 ಸೀಟು ಗೆಲ್ಲಲು ನೆರವಾಗಲಿದೆ ಎಂದರು.
ಇದನ್ನೂ ಓದಿ: ಆಂಧ್ರದಲ್ಲಿ ಮಾಫಿಯಾ ರಾಜ್, ಭ್ರಷ್ಟ ವೈಎಸ್‌ಆರ್‌ಸಿಪಿ ಸರ್ಕಾರ ಜೂನ್ 4ರ ನಂತರ ಮಾಯ: ಮೋದಿ - PM Modi