ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್ ಬಂಧಿಸಿರುವುದನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಬಿಆರ್ಎಸ್ ಖಂಡಿಸಿದ್ದು, ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಪ್ರಖ್ಯಾತ ಸ್ಟಾರ್ ನಟನೊಬ್ಬನೊಂದಿಗೆ ಸರ್ಕಾರ ನಡೆದುಕೊಂಡಿರುವ ರೀತಿ ಸರಿಯಲ್ಲ ಎಂದು ಅವು ಹೇಳಿವೆ.
ಅಲ್ಲು ಅರ್ಜುನ್ ಅವರೊಂದಿಗೆ ಇನ್ನಷ್ಟು ಉತ್ತಮವಾಗಿ ವ್ಯವಹರಿಸಬಹುದಿತ್ತು ಎಂದು ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದ್ದರೆ, ಖ್ಯಾತ ನಟನನ್ನು ಸಾಮಾನ್ಯ ಕ್ರಿಮಿನಲ್ಗಳಂತೆ ನಡೆಸಿಕೊಂಡಿರುವುದು ಸರಿಯಲ್ಲ ಎಂದು ಬಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
National Award-winning actor Allu Arjun, lifted straight from his bedroom without even being given time to change, is a disgraceful act of mismanagement and disrespect.
— Bandi Sanjay Kumar (@bandisanjay_bjp) December 13, 2024
A star of his stature, who brought global recognition to Indian cinema, deserved better treatment.
The tragic…
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಂಡಿ ಸಂಜಯ್ ಕುಮಾರ್, "ರಾಷ್ಟ್ರ ಪ್ರಶಸ್ತಿ ವಿಜೇತ ನಟನಿಗೆ ಬಟ್ಟೆ ಬದಲಾಯಿಸಲು ಸಹ ಸಮಯ ನೀಡದೆ ನೇರವಾಗಿ ಅವರ ಬೆಡ್ ರೂಮ್ನಿಂದ ಅವರನ್ನು ಬಂಧಿಸಿಕೊಂಡು ಬರಲಾಗಿದೆ. ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟ ನಟನೊಂದಿಗೆ ಉತ್ತಮವಾಗಿ ವರ್ತಿಸಬೇಕಿತ್ತು. ಇದು ದುರಾಡಳಿತ ಮತ್ತು ಅಗೌರವದ ಹಾಗೂ ನಾಚಿಕೆಗೇಡಿನ ಕೃತ್ಯ" ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಅಲ್ಲು ಅರ್ಜುನ್ ಅವರ 'ಪುಷ್ಪ 2' ಬಿಡುಗಡೆಯಾದ ಸಂಧ್ಯಾ ಚಿತ್ರಮಂದಿರದಲ್ಲಿ ಮಹಿಳೆಯೊಬ್ಬರ ದುರಂತ ಸಾವು ತೀವ್ರ ದುರದೃಷ್ಟಕರ ಎಂದು ಹೇಳಿದ ಸಚಿವ ಬಂಡಿ, ಈ ಘಟನೆಯು ಭಾರಿ ಜನಸಂದಣಿಯನ್ನು ನಿರ್ವಹಿಸುವಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸುತ್ತದೆ ಎಂದರು.
Arrest of National Award winning star Allu Arjun is the pinnacle of insecurity of the rulers!
— KTR (@KTRBRS) December 13, 2024
I totally sympathize with the victims of the stampede but who failed really?
Treating @alluarjun Garu as a common criminal is uncalled for especially for something he isn’t directly… pic.twitter.com/S1da96atYa
"ಇಂಥ ನಿರ್ಲಕ್ಷ್ಯ ಮತ್ತು ತಪ್ಪು ನಿರ್ವಹಣೆ ಸ್ವೀಕಾರಾರ್ಹವಲ್ಲ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಅವರ ಅಭಿಮಾನಿಗಳು ಘನತೆಗೆ ಅರ್ಹರು" ಎಂದು ಸಂಜಯ್ ಹೇಳಿದರು.
ಅಲ್ಲು ಅರ್ಜುನ್ ಬಂಧನವನ್ನು ಟೀಕಿಸಿದ ಕೆ.ಟಿ.ರಾಮರಾವ್, ನಟನನ್ನು ಸಾಮಾನ್ಯ ಅಪರಾಧಿಯಂತೆ ಪರಿಗಣಿಸುವುದು ಅನಗತ್ಯ ಮತ್ತು ಸೂಕ್ತವಲ್ಲ ಎಂದು ಹೇಳಿದರು. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಈ ಬಂಧನವು ಆಡಳಿತದಲ್ಲಿರುವವರ ಅಭದ್ರತಾ ಭಾವನೆಯ ಪರಾಕಾಷ್ಠೆಯಾಗಿದೆ. ಕಾಲ್ತುಳಿತಕ್ಕೆ ಬಲಿಯಾದವರ ಬಗ್ಗೆ ನನಗೆ ಸಂಪೂರ್ಣ ಸಹಾನುಭೂತಿ ಇದೆ. ಆದರೆ ನಿಜವಾಗಿಯೂ ಯಾರ ವೈಫಲ್ಯದಿಂದ ಈ ಘಟನೆ ನಡೆದಿದೆ? ಅಲ್ಲು ಅರ್ಜುನ್ ಅವರನ್ನು ಸಾಮಾನ್ಯ ಅಪರಾಧಿ ಎಂದು ಪರಿಗಣಿಸುವುದು ಅನಗತ್ಯ. ಅವರು ಘಟನೆಗೆ ನೇರವಾಗಿ ಜವಾಬ್ದಾರರಲ್ಲ" ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಹಿರಿಯ ನಟ ಎನ್ ಬಾಲಕೃಷ್ಣ ಅವರು ಅಲ್ಲು ಅರ್ಜುನ್ ಬಂಧನವನ್ನು ಅನ್ಯಾಯ ಎಂದು ಹೇಳಿದ್ದು, ಯಾವಾಗಲೂ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು. ಅಲ್ಲು ಅರ್ಜುನ್ ಅವರ ಬಂಧನ ಅನ್ಯಾಯ ಎಂದು ವೈಎಸ್ಆರ್ಸಿಪಿ ಹಿರಿಯ ಮುಖಂಡ ಮತ್ತು ಆಂಧ್ರಪ್ರದೇಶದ ಮಾಜಿ ಸಚಿವ ಅಂಬಾಟಿ ರಾಮ ಬಾಬು ಹೇಳಿದ್ದಾರೆ. 'ಪುಷ್ಪ 2' ಚಿತ್ರದ ಪ್ರೀಮಿಯರ್ ಶೋ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನಟ ಅಲ್ಲು ಅರ್ಜುನ್ ಅರೆಸ್ಟ್! - ALLU ARJUN DETAINED