ಹೈದರಾಬಾದ್: ಟೀ ಮಾಡುವ ವಿಚಾರಕ್ಕೆ ಅತ್ತೆ, ಸೊಸೆ ನಡುವೆ ವಾಗ್ದಾದ ನಡೆದಿದೆ. ನಂತರ ಜಗಳವು ಸೊಸೆಯ ಕೊಲೆಯಲ್ಲಿ ಅಂತ್ಯ ಕಂಡಿದೆ. ಅತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಸನ ನಗರದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ಇನ್ಸ್ಪೆಕ್ಟರ್ ವೆಂಕಟರಾಮಿ ರೆಡ್ಡಿ ಮಾಹಿತಿ ನೀಡಿದ್ದಾರೆ.
ವಿಕಾರಾಬಾದ್ ಜಿಲ್ಲೆಯ ಮೋಮಿನಪೇಟ್ ಮಂಡಲದ ಟೇಕುಲಪಲ್ಲಿ ಗ್ರಾಮದ ಅಜ್ಮೀರಾ ಬೇಗಂ (28) ಹತ್ತು ವರ್ಷಗಳ ಹಿಂದೆ ಹಸನ್ ನಗರದ ಅಬ್ಬಾಸ್ ಎಂಬಾತನನ್ನು ಮದುವೆಯಾಗಿದ್ದಳು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆ ಆದಾಗಿನಿಂದ ಅಜ್ಮೀರಾ ಬೇಗಂ ಮತ್ತು ಅತ್ತೆ ಫರ್ಜಾನಾ ಬೇಗಂ ನಡುವೆ ಜಗಳ ನಡೆಯುತ್ತಿತ್ತು. ದಿನವೂ ಯಾವುದೋ ವಿಷಯಕ್ಕೆ ಜಗಳವಾಡುತ್ತಿದ್ದರು. ಅತ್ತೆ ಗುರುವಾರ ಬೆಳಗ್ಗೆ ಚಹಾ ಮಾಡಲು ಸೊಸೆಗೆ ತಿಳಿಸಿದರು. ಮಕ್ಕಳನ್ನು ಶಾಲೆಗೆ ಕಳುಹಿಸುವ ಧಾವಂತದಲ್ಲಿದ್ದ ಅಜ್ಮೀರಾ ಬೇಗಂ ಅತ್ತೆ ಮಾತನ್ನು ನಿರ್ಲಕ್ಷಿಸಿದ್ದಳು. ಮಕ್ಕಳಿಬ್ಬರನ್ನೂ ಶಾಲೆಗೆ ಕಳುಹಿಸಿದ ಬಳಿಕ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದೆ.
ಇದರಿಂದ ಕುಪಿತಳಾದ ಅತ್ತೆ ಫರ್ಜಾನಾ ಬೇಗಂ ತನ್ನ ಸೊಸೆಯ ಕೊರಳಿಗೆ ದುಪ್ಪಟ್ಟಾದಿಂದ ಬಿಗಿದು ಕೊಲೆ ಮಾಡಿದ್ದಾಳೆ. ಆ ಸಮಯದಲ್ಲಿ ಆಕೆ ಪತಿ ಮತ್ತು ಮಾವ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಸೊಸೆಯ ಪೋಷಕರ ದೂರಿನ ಮೇರೆಗೆ ಫರ್ಜಾನಾ ಬೇಗಂ ಹಾಗೂ ಮಹಮ್ಮದ್ ನೂರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪತ್ನಿ: ಕುಡಿದ ಅಮಲಿನಲ್ಲಿ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಪತಿಯನ್ನು ಪತ್ನಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಚೌಟಕೂರ್ ಮಂಡಲದ ಸುಲ್ತಾನಪುರದಲ್ಲಿ ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪುಳಕಲ್ ಎಸ್ಐ ಶ್ರೀಕಾಂತ್ ತಿಳಿಸಿದರು.
ಸುಲ್ತಾನಪುರದ ಮನ್ನೆ ಮಾನಯ್ಯ ಎಂಬವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಮೊದಲ ಮಗಳು ಸುಕನ್ಯಾಳನ್ನು ಮದುವೆಯಾಗಿ ಅವಳಿಗೆ ಒಂದು ಮಗು ಜನಿಸಿತ್ತು. ಗಂಡನ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಎರಡು ವರ್ಷಗಳಿಂದ ತಾಯಿಯೊಂದಿಗೆ ವಾಸವಾಗಿದ್ದಾಳೆ. ಪುತ್ರ ಪ್ರವೀಣ್ ಕುಮಾರ್ ವಿವಾಹವಾಗಿದ್ದಾರೆ. ಏಳು ತಿಂಗಳ ಹಿಂದೆ ಪ್ರವೀಣ್ ಕುಮಾರ್ ಪತ್ನಿ ಜಗಳದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನಿಂದ ಮಾನಯ್ಯ ತನ್ನ ಪತ್ನಿ ಇಂದಿರಮ್ಮ, ಪುತ್ರಿಯರು, ಮೊಮ್ಮಗಳೊಂದಿಗೆ ಮನೆಯಲ್ಲಿಯೇ ವಾಸಿಸಲು ಆರಂಭಿಸಿದ್ದನು. ಯಾವಾಗಲೂ ಕುಡಿತದ ಅಮಲಿನಲ್ಲಿರುತ್ತಿದ್ದ ಮಾನಯ್ಯ ತನ್ನ ಹೆಂಡತಿ ಮತ್ತು ಹೆಣ್ಣು ಮಕ್ಕಳನ್ನು ನಿಂದಿಸುತ್ತಿದ್ದನು. ಆದರೆ, ಬುಧವಾರ ಮಧ್ಯರಾತ್ರಿಯೂ ಕುಡಿದು ಮನೆಗೆ ಬಂದಿದ್ದನು.
ಬಾಗಿಲು ಮುಚ್ಚಿದ್ದರಿಂದ ಪತ್ನಿ ಹಾಗೂ ಪುತ್ರಿಯರನ್ನು ನಿಂದಿಸಿ ಅಲ್ಲೇ ಇದ್ದ ಸಲಿಕೆ, ಕೊಡಲಿಯಿಂದ ಬಾಗಿಲು ಒಡೆಯಲು ಯತ್ನಿಸಿದ್ದಾನೆ. ತಾಯಿ ಮತ್ತು ಮಗಳು ಹೊರಗೆ ಬಂದು ಮಾನಯ್ಯನಿಂದ ಕೊಡಲಿ ಮತ್ತು ಗುದ್ದಲಿಯನ್ನು ಕಸಿದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಆತ ಮಾನಯ್ಯನ ಮಗಳು ಸುಕನ್ಯಾಳೊಂದಿಗೆ ಅನುಚಿತವಾಗಿ ವರ್ತಿಸಲು ಯತ್ನಿಸಿದ್ದಾನೆ. ಇದರಿಂದ ಕುಪಿತಗೊಂಡ ಇಂದಿರಮ್ಮ ತನ್ನ ಬಳಿಯಿದ್ದ ಕೊಡಲಿಯಿಂದ ಗಂಡನ ಕುತ್ತಿಗೆ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಳೆ. ಗಂಭೀರವಾಗಿ ಗಾಯಗೊಂಡ ಮಾನಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗ್ರಾಮಸ್ಥರಿಂದ ವಿಷಯ ತಿಳಿದುಕೊಂಡ ಜೋಗಿಪೇಟೆ ಸಿಐ ಅನಿಲ್ ಕುಮಾರ್ ಹಾಗೂ ಪುಲ್ಕಲ್ ಎಸ್ ಐ ಶ್ರೀಕಾಂತ್ ಅದೇ ದಿನ ರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ವಿವರಗಳನ್ನು ಸಂಗ್ರಹಿಸಿದರು. ಇಂದಿರಮ್ಮ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.