ಜಮ್ಮು: ಇಲ್ಲಿಗೆ ಸಮೀಪದ ಅಖ್ನೂರ್ ಸೆಕ್ಟರ್‌ನ ಬತಲ್ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದ ಉಗ್ರರ ಪೈಕಿ ಮೂವರನ್ನು ಹೊಡೆದುರುಳಿಸಲಾಗಿದೆ ಎಂದು ಭದ್ರತಾ ಪಡೆಗಳು ಸೋಮವಾರ ತಿಳಿಸಿವೆ.
ಸೈನಿಕರಿದ್ದ ವಾಹನದ ಮೇಲೆ ಉಗ್ರರು ದಾಳಿ ಮಾಡಿ ಅರಣ್ಯದಲ್ಲಿ ಅಡಗಿದ್ದರು. ಶೋಧ ಕಾರ್ಯಾಚರಣೆಯಲ್ಲಿ ಇಂದು ಓರ್ವ ಉಗ್ರನನ್ನು ಪತ್ತೆ ಮಾಡಿ ಹತ್ಯೆ ಮಾಡಲಾಗಿದೆ. ಬಳಿಕ ಇನ್ನಿಬ್ಬರಿಗೂ ಗುಂಡಿಕ್ಕಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಇದಕ್ಕೆ ಸೇನೆ ಪ್ರತಿದಾಳಿ ನಡೆಸಿದೆ. ಇದರಿಂದ ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಶಸ್ತ್ರಾಸ್ತ್ರಗಳೊಂದಿಗೆ ಮೃತದೇಹವನ್ನು ವಶಪಡಿಸಿಕೊಳ್ಳಲಾಯಿತು ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 6.30ರ ಸುಮಾರಿಗೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಸೈನಿಕರೂ ಪ್ರತಿದಾಳಿ ನಡೆಸಿದರು. ಈ ವೇಳೆ ಉಗ್ರರು ಹತ್ತಿರದ ಅರಣ್ಯ ಪ್ರದೇಶದ ಕಡೆಗೆ ಓಡಿಹೋದರು. ನಂತರ ಭಯೋತ್ಪಾದಕರು ಬಂಕರ್ಗಳಲ್ಲಿ ಅಡಗಿದ್ದರು. ಸೇನೆಯ ವಿಶೇಷ ಪಡೆಗಳು ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳು (ಎನ್‌ಎಸ್‌ಜಿ) ಜಂಟಿ ಕಾರ್ಯಾಚರಣೆ ನಡೆಸಿದವು.
ಸ್ಫೋಟ ಮತ್ತು ಗುಂಡಿನ ದಾಳಿ ನಡೆಸಲಾಗಿದೆ. ಅಡಗಿರುವ ಉಗ್ರರ ಪತ್ತೆಗಾಗಿ ಹೆಲಿಕಾಪ್ಟರ್ ಕಣ್ಗಾವಲು ಇಡಲಾಗಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಸರಣಿ ದುಷ್ಕೃತ್ಯ: ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಬಳಿಕ ಕಣಿವೆ ನಾಡಿನಲ್ಲಿ ಸರಣಿ ಭಯೋತ್ಪಾದಕ ದಾಳಿ ನಡೆಯುತ್ತಿದೆ. ಅಕ್ಟೋಬರ್ 18ರಂದು ಗಂದೇರ್ಬಲ್ ಜಿಲ್ಲೆಯಲ್ಲಿ ಸುರಂಗ ನಿರ್ಮಾಣದ ಸ್ಥಳದಲ್ಲಿ ನಡೆದ ಗಾಳಿಯಲ್ಲಿ ವೈದ್ಯ ಸೇರಿ 6 ಮಂದಿ ಕಾರ್ಮಿಕರು ಹತ್ಯೆಯಾಗಿದ್ದರು.
ಬಳಿಕ ಅಕ್ಟೋಬರ್ 24ರಂದು ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ ಬಳಿ ಸೇನಾ ಟ್ರಕ್ ಮೇಲೆ ನಡೆದ ಉಗ್ರ ದಾಳಿಯಲ್ಲಿ ಮೂವರು ಯೋಧರು ಸೇರಿ ಐವರು ಸಾವಿಗೀಡಾಗಿದ್ದರು. ಇದರ ಬೆನ್ನಲ್ಲೇ ಇಂದು ಮತ್ತೊಂದು ದಾಳಿ ನಡೆದಿದೆ.
ಲೆಫ್ಟಿನೆಂಟ್ ಗವರ್ನರ್ ಸಭೆ: ಜಮ್ಮು-ಕಾಶ್ಮೀರದ ವಿವಿಧೆಡೆ ಭಯೋತ್ಪಾದನೆ ಮತ್ತೆ ಹೆಚ್ಚಾದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದರು. ಉಗ್ರರ ಮೇಲೆ ನಿಗಾ ಮತ್ತು ವಲಸೆ ಕಾರ್ಮಿಕರ ರಕ್ಷಣಾ ಕ್ರಮಗಳನ್ನು ಹೆಚ್ಚಿಸುವಂತೆ ಸೂಚಿಸಿದ್ದರು.
ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಸೇನಾ ವಾಹನ ಗುರಿಯಾಗಿಸಿ ದಾಳಿ: ಇಬ್ಬರು ಯೋಧರು, ಕಾರ್ಮಿಕರ ಸಾವು