ತೆಹ್ರಿ (ಉತ್ತರಾಖಂಡ): ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಹೆದರಿ ಗೈರಾಗುವುದು ಸಾಮಾನ್ಯ. ಆದರೆ, ಉತ್ತರಾಖಂಡ್ನಲ್ಲಿ ಇದು ಉಲ್ಟಾ ಆಗಿದೆ. ಇಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿದ್ದು, ಶಿಕ್ಷಕರೇ ಗೈರು ಹಾಜರಾಗಿದ್ದಾರೆ. ಶಿಕ್ಷಕರಿಗಾಗಿ ಕಾಯ್ದ ಮಕ್ಕಳು ಕಡೇಗೆ ತಾವೇ ಪ್ರಶ್ನೆ ಪತ್ರಿಕೆ ಪಡೆದು ನಿಷ್ಟೆಯಿಂದ ಪರೀಕ್ಷೆ ಬರೆದಿದ್ದಾರೆ. ಈ ವಿಚಿತ್ರ ಘಟನೆ ಇದೀಗ ಪೋಷಕರ ಆಕ್ರೋಶ ಮತ್ತು ಶಿಕ್ಷಣ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ.
ಶಿಕ್ಷಕರೇ ಗೈರು: ತೆಹ್ರಿ ಜಿಲ್ಲೆಯ ಜೂನಿಯರ್ ಸ್ಕೂಲ್ ನೆಲ್ಡಾದದಲ್ಲಿ ಅರ್ಧ ವಾರ್ಷಿಕ ಪರೀಕ್ಷೆಯ ದಿನದಂದು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಿದ್ದಾರೆ. ಆದರೆ, ಪರೀಕ್ಷೆ ಎಂಬುದನ್ನು ಮರೆತು ಶಿಕ್ಷಕರು ನಿರ್ಲಕ್ಷ್ಯ ತೋರಿ ಗೈರು ಹಾಜರಾಗಿದ್ದಾರೆ. ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಈ ಅವ್ಯವಸ್ಥೆ ವಿರುದ್ಧ ಇದೀಗ ದೂರುಗಳು ಕೇಳಿ ಬಂದಿದೆ.
ತೆಹ್ರಿ ಜಿಲ್ಲೆಯ ಜಖನಿಧಾರ್ ಬ್ಲಾಕ್‌ನ ಜೂನಿಯರ್ ಹೈಸ್ಕೂಲ್ ನೆಲ್ಡಾದಲ್ಲಿ ಗಣಿತ ಮತ್ತು ಕಲೆ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಇದರ ಮೇಲ್ವಿಚಾರಣೆಗೆ ಇಬ್ಬರು ಶಿಕ್ಷಕರನ್ನು ಕೂಡ ನೇಮಕ ಮಾಡಲಾಗಿತ್ತು. ಆದರೆ, ಪರೀಕ್ಷೆ ನಡೆಸಲು ಯಾವುದೇ ಶಿಕ್ಷಕರು ಹಾಜರಾಗಿಲ್ಲ. ಈ ಕುರಿತು ಮಾತಾಡಿರುವ ಶಿಕ್ಷಣ ಇಲಾಖೆ, ಬೇಜವಾಬ್ದಾರಿತನ ತೋರಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗೇ ಮತ್ತೆ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದಿದ್ದಾರೆ.
ಅರ್ಧವಾರ್ಷಿಕ ಪರೀಕ್ಷೆ: ಪ್ರಸಕ್ತ ಸಾಲಿ ಶೈಕ್ಷಣಿಕ ವರ್ಷದ ಮಧ್ಯವಾರ್ಷಿಕ ಪರೀಕ್ಷೆಯ ಗಣಿತ ವಿಷಯವನ್ನು ಬುಧವಾರ 6 ರಿಂದ 8ನೇ ತರಗತಿ ಮಕ್ಕಳಿಗೆ ನಿಗದಿಪಡಿಸಲಾಗಿತ್ತು. ಪರೀಕ್ಷೆಗೆ ಸಮಯಕ್ಕೆ ಹಾಜರಾದ ಮಕ್ಕಳು ಶಿಕ್ಷಕರಿಗಾಗಿ ಕಾದಿದ್ದಾರೆ. ಸಮಯ ಮೀರಿದರೂ ಪ್ರಶ್ನೆ ಪತ್ರಿಕೆ ನೀಡಲು ಶಿಕ್ಷಕರು ಆಗಮಿಸದೇ ಇದ್ದಾಗ ಕಡೆಗೆ ವಿದ್ಯಾರ್ಥಿಗಳೇ ಸ್ವತಃ ಪ್ರಶ್ನೆ ಪತ್ರಿಕೆ ತೆರೆದು ಎಲ್ಲರೂ ಹಂಚಿಕೊಂಡು ಪರೀಕ್ಷೆ ಬರೆದಿದ್ದಾರೆ. ಅಷ್ಟೇ ಅಲ್ಲದೇ, ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ಶಿಕ್ಷಕರ ಮೇಜಿನ ಮೇಲಿಟ್ಟು ವಿಧೇಯ ವಿದ್ಯಾರ್ಥಿಗಳಂತೆ ಮನೆಗೆ ಮರಳಿದ್ದಾರೆ.
ಕಾರಣ ನೀಡಿದ ಮುಖ್ಯೋಪಾಧ್ಯಾಯರು: ಶಾಲೆಯಲ್ಲಿ ಪರೀಕ್ಷೆ ಹಿನ್ನಲೆ ಮುಖ್ಯೋಪಾಧ್ಯಾಯರಾದ ಪ್ರಮೊದ್ ರಾವತ್ ಜೊತೆಗೆ ಬಿರು ದೇವಿಯನ್ನು ಶಾಲೆಗೆ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಮುಖ್ಯೋಪಾಧ್ಯಯರು ದಿಢೀರ್ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾಗಿ ಪರೆ ನೀಡಿದ್ದಾರೆ. ಇನ್ನು ನಿಯೋಜಿಸಿದ್ದ ಮತ್ತೊಬ್ಬ ಶಿಕ್ಷಕರಾದ ಬಿರು ದೇವಿ ಇತ್ತೀಚೆಗಷ್ಟೆ ನೆಲ್ಡಾಗೆ ವರ್ಗಾವಣೆ ಮಾಡಿದ್ದರೂ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಸಮಂಗಾವ್ನಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕ್ರಮಕ್ಕೆ ಆಗ್ರಹಿಸಿದ ಗ್ರಾಮದ ಮುಖ್ಯಸ್ಥರು: ನೆಲ್ಡಾದ ಗ್ರಾಮ ಮುಖ್ಯಸ್ಥರು, ಶಿಕ್ಷಕರ ಈ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ಬೇಜವಾಬ್ದಾರಿತನ ತೋರಿದ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಅತ್ಯುತ್ತಮ ಶಾಲೆ ಪ್ರಶಸ್ತಿ ಗೆದ್ದ ದೆಹಲಿ: ಮಧುರೈ, ಮಧ್ಯಪ್ರದೇಶದ ಶಾಲೆಗಳಿಗೂ ಅವಾರ್ಡ್