ತೆಂಕಶಿ (ತಮಿಳುನಾಡು): ತಮಿಳುನಾಡಿನಲ್ಲಿ ಭಾರಿ ಮಳೆ ಸುರಿದ್ದು, ತೆಂಕಶಿ ಜಿಲ್ಲೆಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಕುರ್ಟಾಲಂ ಜಲಪಾತವು ಶುಕ್ರವಾರ ಉಕ್ಕಿ ಹರಿದು ಓರ್ವ ಸಾವನ್ನಪ್ಪಿದ್ದಾನೆ. ಜೊತೆಗೆ ಮತ್ತೆ ಮಳೆಯ ಮನ್ಸೂಚನೆ ಕೂಡ ಇದೆ. ಆದ್ದರಿಂದ ಜಲಪಾತದಲ್ಲಿ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ತಮಿಳುನಾಡಿನಾದ್ಯಂತ ಈ ಬಾರಿ ಬಿಸಿಲಿನ ತಾಪ ಅಧಿಕವಾಗಿತ್ತು. ಇದೀಗ ಕಳೆದ ಕೆಲ ದಿನಗಳಿಂದ ಹಲವೆಡೆ ಮಳೆಯಾಗುತ್ತಿದೆ. ಅದರಲ್ಲೂ, ತೆಂಕಶಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕುರ್ಟಾಲಂ ಐಂತರುವಿ (ಐದು ಜಲಪಾತಗಳು)ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು.
ಆದರೆ, ಏಕಾಏಕಿ ಭಾರಿ ಮಳೆಯಿಂದ ಜಲಪಾತದಲ್ಲಿ ಪ್ರವಾಹ ಉಂಟಾಗಿ, ಭೋರ್ಗರೆದಿದೆ. ಈ ವೇಳೆ ಅನೇಕರು ಜನರು ಜಲಪಾತದ ಕಳೆಗಡೆ ಇದ್ದರು. ಹಠಾತ್ ಆಗಿ ನೀರು ಉಕ್ಕಿ ಹರಿಯುತ್ತಿದ್ದಂತೆ ಜನತೆ ದಿಕ್ಕಾಪಾಲಾಗಿ ಓಡಿ ಬಂದಿದ್ದಾರೆ. ಅಲ್ಲದೇ, ನೀರಿನ ರಭಸವನ್ನು ಕಂಡು ಭಯ ಬಿದ್ದು ಕೆಲವರು ಸಹಾಯಕ್ಕಾಗಿ ಕೂಗಿಕೊಂಡರು. ಆಗ ಜಲಪಾತದ ಬಳಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಅಂಗಡಿಯವರು ಪ್ರವಾಸಿಗರ ರಕ್ಷಣೆಗೆ ಧಾವಿಸಿದರು.
ಆದರೆ, ಈ ಸಂದರ್ಭದಲ್ಲಿ ತಿರುನಲ್ವೇಲಿ ಜಿಲ್ಲೆಯ ಅಶ್ವಿನ್ (17) ಎಂಬ ಯುವಕ ಪ್ರವಾಹದಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ತೆಂಕಶಿ ಜಿಲ್ಲಾಧಿಕಾರಿ ಕಮಲ್ ಕಿಶೋರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದು ಸ್ಥಳಕ್ಕೆ ದೌಡಾಯಿಸಿದರು. ಅಗ್ನಿಶಾಮಕ ದಳದ ನೇತೃತ್ವದಲ್ಲಿ ಯುವಕನಾಗಿ ತೀವ್ರ ಶೋಧ ನಡೆಸಲಾಗಿದೆ. ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.
ಮತ್ತೊಂದೆಡೆ, ಕೆಲ ಮುಂದಿನ ದಿನಗಳು ಸಹ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮುಂದಿನ ಆದೇಶದವರೆಗೆ ಪ್ರವಾಸಿಗರು ಜಲಪಾತ ಹಾಗೂ ಅಣೆಕಟ್ಟು ಪ್ರದೇಶಗಳಿಗೆ ತೆರಳದಂತೆ ನಿರ್ಬಂಧ ವಿಧಿಸಿದೆ. ಅಗ್ನಿಶಾಮಕ ದಳದಿಂದ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯ ಜಲಪಾತದ ಪ್ರದೇಶದಲ್ಲಿ ಸುರಕ್ಷತಾ ಕ್ರಮವಾಗಿ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ.
ಇದನ್ನೂ ಓದಿ: ಪೂರ್ವ ಮುಂಗಾರು ಬಿರುಸು: ಭಾರಿ ಮಳೆ ಮುನ್ಸೂಚನೆ, ಈ 17 ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ - Karnataka Rain Alert