ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯ ಕುರಿತು ಪ್ರಾದೇಶಿಕ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧಿಕಾರಿಗಳೊಂದಿಗೆ ಪೂರ್ವಸನ್ನದ್ಧತೆಯ ಬಗ್ಗೆ ಪರಿಶೀಲನಾ ಸಭೆ ನಡೆಸಿದರು.
ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಮಳೆಯಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈ, ತಿರುವಳ್ಳುವರ್, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ಅಕ್ಟೋಬರ್ 15ರಂದು ರಜೆ ಘೋಷಿಸಲಾಗಿದೆ. ಜೊತೆಗೆ, ಐಟಿ ವಲಯದ ಉದ್ಯೋಗಿಗಳಿಗೂ ಅಕ್ಟೋಬರ್ 15ರಿಂದ 18ರವರೆಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ತಿಳಿಸಲಾಗಿದೆ.
ಪ್ರಾದೇಶಿಕ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಬಂಗಾಳಕೊಲ್ಲಿಯ ಆಗ್ನೇಯದಲ್ಲಿ ಕಡಿಮೆ ಒತ್ತಡ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಕಡಿಮೆ ಒತ್ತಡದ ಗಾಳಿ ಪಶ್ಚಿಮ ವಾಯುವ್ಯದಿಂದ ಉತ್ತರಕ್ಕೆ ಸಾಗಲಿದ್ದು ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರ ಪ್ರದೇಶದ ಕೆಲವು ಕರಾವಳಿ ತೀರದಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಎನ್ಡಿಆರ್ಎಫ್ ಮತ್ತು ತಮಿಳುನಾಡು ವಿಪತ್ತು ನಿರ್ವಹಣಾ ಪಡೆಗಳಿಗೆ ಪರಿಸ್ಥಿತಿ ನಿರ್ವಹಣೆಗೆ ಪೂರ್ವಸಿದ್ಧತೆ ಹಾಗೂ ಪರಿಸ್ಥಿತಿಗಳ ಪರಿಣಾಮಕಾರಿ ಕಾರ್ಯನಿರ್ವಹಣೆ ಮಾಡುವಂತೆ ಸಿಎಂ ಸೂಚಿಸಿದ್ದಾರೆ. ಮಳೆ ಸಂಬಂಧಿತ ಸಮಸ್ಯೆಗಳ ನಿರ್ವಹಣೆಗೆ ತಾತ್ಕಾಲಿಕ ನಿಯಂತ್ರಣ ಕೊಠಡಿ ತೆರೆಯುವಂತೆ ಹಾಗೂ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ಭಾರಿ ಹಾನಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಂತಹ ಸ್ಥಳಗಳಲ್ಲಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಪ್ರವಾಹ ಸ್ಥಳಗಳಲ್ಲಿ ಇಂದು ರಕ್ಷಣಾ ಬೋಟ್ಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ನಿರ್ವಹಣಾ ಅಧಿಕಾರಿಗಳು ತುರ್ತು ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ಕೆ ಮುಂದಾಗುವಂತೆ ಹಾಗೂ ತಕ್ಷಣ ಪೂರ್ವಸಿದ್ಧತಾ ಕಾರ್ಯ ನಡೆಸುವಂತೆ ತಿಳಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ರೋ ಮತ್ತು ಎಂಆರ್ಟಿಎಸ್ಗಳ ಸಂಚಾರ ಹೆಚ್ಚಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಸೇರಿದಂತೆ ಆಹಾರ ಮತ್ತು ಔಷಧಗಳ ಕುರಿತು ಖಾತ್ರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮೇಲಿನ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಎದುರಾಗುವ ಸ್ಥಿತಿಗಳ ನಿರ್ವಹಣೆಗೆ ಸಕಲ ರೀತಿಯಲ್ಲಿ ಸಜ್ಜಾಗುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.
ಮಳೆ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ಡಿಸಿಎಂ ಉದಯನಿಧಿ ಸ್ಟಾಲಿನ್, ರಾಜ್ಯ ಸಚಿವರು, ಮುಖ್ಯ ಕಾರ್ಯದರ್ಶಿ ಎನ್.ಮುರುಗನಂದಂ, ಡಿಜಿಪಿ ಶಂಕರ್ ಜಿವಲ್ ಹಾಗು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: ಮಣಿಪುರದ ಜನಾಂಗೀಯ ಕಲಹ ಪರಿಹಾರಕ್ಕೆ ನಾಳೆ ಮಹತ್ವದ ಸಭೆ ಕರೆದ ಗೃಹ ಸಚಿವಾಲಯ