ಕೋಲ್ಕತ್ತಾ: ಆರ್ಜಿ ಕರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಡೇಟಾ ಎಂಟ್ರಿ ಆಪರೇಟರ್ ಹಾಗೂ ಸಂಸ್ಥೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಆಪ್ತ ಸಹಾಯಕ (ಪಿಎ)ನನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ವಶಕ್ಕೆ ಪಡೆದಿದ್ದಾರೆ.
ಆರ್ಜಿ ಕರ್ ವೈದ್ಯಕೀಯ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾಗಿರುವ ಆರ್ಥಿಕ ಅವ್ಯವಹಾರಗಳ ಹಿನ್ನೆಲೆ ಶುಕ್ರವಾರ ಬೆಳಗ್ಗೆ ಇಡಿ ಅಧಿಕಾರಿಗಳು ಮಾಜಿ ಪ್ರಾಂಶುಪಾಲರಾದ ಸಂದೀಪ್ ಘೋಷ್ ಮತ್ತು ಅವರ ಮೂವರು ಸಹಚರರು ಸೇರಿದಂತೆ ಮನೆ ಸೇರಿದಂತೆ ಹಲವು ಸ್ಥಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದಕ್ಷಿಣ 24 ಪರಗಣ ಜಿಲ್ಲೆಯ ಸುಭಾಶ್ಗ್ರಾಮಮ್ನ ಡಿಇಒ ಪ್ರಸನ್ನ ಚಟ್ಟೋಪಾಧ್ಯಾಯ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು.
ನಾಲ್ಕು ಗಂಟೆಗಳ ಕಾಲ ದಾಳಿ ಮತ್ತು ಶೋಧ ಕಾರ್ಯಾಚರಣೆ ಬಳಿಕ ಇಡಿ ಅಧಿಕಾರಿಗಳು ಚಟ್ಟೋಪಾಧ್ಯಾಯ ಅವರನ್ನು ವಶಕ್ಕೆ ಪಡೆದು, ಕರೆದೊಯ್ದಿದ್ದಾರೆ. ಮೂಲಗಳ ಪ್ರಕಾರ, ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವರವಾದ ವಿಚಾರಣೆ ಹಿನ್ನೆಲೆ ಆತನನ್ನು ವಶಕ್ಕೆ ಪಡೆಯಲಾಗಿದೆ.
ಆರ್ಜಿ ಕರ್ ವೈದ್ಯಕೀಯ ಕಾಲೇಜಿಗೆ ವಿವಿಧ ವಸ್ತುಗಳ ಪೂರೈಕೆ ಮಾಡುತ್ತಿದ್ದ ಬಿಪ್ಲಬ್ ಸಿನ್ಹಾ ಮತ್ತು ಕೌಶಿಕ್ ಕೊಲೆ ಅವರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಘೋಷ್ ಅವರನ್ನು ಸಿಬಿಐ ಬಂಧಿಸಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರ ಪತ್ನಿ ಸಂಗೀತಾ ಘೋಷ್, ನನ್ನ ಗಂಡ ಮುಗ್ದರಾಗಿದ್ದು, ತಪ್ಪಾಗಿ ಅವರನ್ನು ಸಿಕ್ಕಿಸುವ ಪ್ರಯತ್ನ ನಡೆಸಲಾಗಿದೆ. ವಿಚಾರಣೆ ಸಂಪೂರ್ಣವಾಗುವವರೆಗೆ ಅವರನ್ನು ವಿಲನ್ ರೀತಿ ಬಿಂಬಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಮನಿ ಲ್ಯಾಂಡರಿಂಗ್ ನಡೆದಿದೆಯಾ ಎಂಬ ನಿಟ್ಟಿನಲ್ಲಿ ಇಡಿ ತನಿಖೆ ನಡೆಸಿದೆ. ಸಂದೀಪ್ ಘೋಷ್ ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿನ ಹಣಕಾಸು ಅವ್ಯವಹಾರ ನಡೆದಿದೆ ಎಂದು ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು. ಇದಾದ ಬಳಿಕ ಸುಮೋಟೋ ಅಡಿ ಇಡಿ ಈ ಕುರಿತು ತನಿಖೆಗೆ ಮುಂದಾಯಿತು. ಇಸಿಐಆರ್ ದಾಖಲಿಸಿದ ಬಳಿಕ ಇಡಿ ತನಿಖೆ ಶುರು ಮಾಡಿದೆ.
ಅರ್ಜಿ ವಜಾ: ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಸಲ್ಲಿಸಿದ್ದ ಅರ್ಜಿನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಪ್ರಕರಣದಲ್ಲಿ ತನ್ನನ್ನು ಕಕ್ಷಿದಾರರನ್ನಾಗಿ ಪರಿಗಣಿಸಬೇಕು ಎಂದು ಕೋರಿ ಘೋಷ್ ಕೋಲ್ಕತ್ತಾ ಹೈಕೋರ್ಟ್ಗೆ ಮನವಿ ಮಾಡಿದ್ದರು. ಆದರೆ, ಈ ಅರ್ಜಿಯನ್ನು ಹೈ ಕೋರ್ಟ್ ವಜಾ ಮಾಡಿದ್ದು. ಈ ಆದೇಶ ಪ್ರಶ್ನಿಸಿ, ಘೋಷ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಅತ್ಯಾಚಾರ ವಿರೋಧಿ ಮಸೂದೆಯ ಜೊತೆಗೆ ತಾಂತ್ರಿಕ ವರದಿ ಕಳುಹಿಸಿಲ್ಲ: ಸಿಎಂ ಮಮತಾ ವಿರುದ್ದ ರಾಜ್ಯಪಾಲ ಕಿಡಿ