ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ತೀವ್ರ ಕಳಪೆಯಾಗಿದೆ. ಭಾರೀ ವಾಹನಗಳ ಸಂಚಾರ ತಡೆಯದ ಆಪ್ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ವಾಯುಗುಣಮಟ್ಟ ತಡೆ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಸೋಮವಾರ ವಿಚಾರಣೆ ನಡೆಸಿತು.
ನಿಯಮ ಸಡಿಲ ಮಾಡಿದ್ದೇಕೆ?: ಈ ವೇಳೆ ಸಿಎಂ ಅತಿಶಿ ಅವರ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠವು, ಕೋರ್ಟ್ ಅನುಮತಿ ಇಲ್ಲದೇ ವಾಯು ಮಾಲಿನ್ಯ ತಡೆಗಟ್ಟುವ ಕ್ರಮಗಳನ್ನು ಸಡಿಲ ಮಾಡಿದ್ದು ಯಾಕೆ?. ಈ ಮೂಲಕ ಅಪಾಯವನ್ನು ಆಹ್ವಾನಿಸುತ್ತೀದ್ದೀರಾ ಎಂದು ಪ್ರಶ್ನಿಸಿತು.
ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಆತಂಕಕಾರಿ ಮಟ್ಟವನ್ನು ಮುಟ್ಟಿದ ನಂತರವೂ ಮಾಲಿನ್ಯ ತಡೆ ಕ್ರಮಗಳನ್ನು ಜಾರಿ ಮಾಡಲು ವಿಳಂಬ ಧೋರಣೆ ಏಕೆ?. ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್‌ನ (GRAP) 4 ನೇ ಹಂತವನ್ನು ಅನುಷ್ಠಾನ ಮಾಡಲು ಸಮಸ್ಯೆಯೇನು ಎಂದು ಪೀಠವು ಕೇಳಿದೆ.
ಭಾರೀ ವಾಹನಗಳ ಪ್ರವೇಶ ನಿಷೇಧ: ಇದಕ್ಕೆ ದೆಹಲಿ ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಇಂದಿನಿಂದಲೇ (ಸೋಮವಾರ) 4ನೇ ಹಂತದ ಕ್ರಮಗಳನ್ನು ಜಾರಿಗೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಗೆ ಭಾರೀ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ವಾಯು ಗುಣಮಟ್ಟ ಸೂಚ್ಯಂಕ 300 ಅಥವಾ 400 ರ ನಡುವೆ ಇದ್ದಾಗ 4ನೇ ಹಂತವನ್ನು ಜಾರಿ ಮಾಡಬೇಕು. ಆದರೆ, ಎಕ್ಯೂಐ ಮಟ್ಟ ನಿಗದಿತ ಮಟ್ಟ ಮೀರಿದ್ದರೂ ನೀವು ಅನುಷ್ಟಾನ ವಿಳಂಬ ಮಾಡಿ, ಅಪಾಯಕ್ಕೆ ಆಹ್ವಾನ ನೀಡುತ್ತಿದ್ದೀರಿ ಎಂದು ನ್ಯಾಯಪೀಠವು ಚಾಟಿ ಬೀಸಿತು. ದಿನದ ಅಂತ್ಯದಲ್ಲಿ ಈ ಸಮಸ್ಯೆಯನ್ನು ವಿವರವಾಗಲಿ ಆಲಿಸುವುದಾಗಿ ಕೋರ್ಟ್ ತಿಳಿಸಿತು.
400 ಕ್ಕಿಂತ ಹೆಚ್ಚಾದ ಎಕ್ಯುಐ: ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಸೋಮವಾರ ಬೆಳಗ್ಗೆ 457ಕ್ಕೆ ತಲುಪಿದೆ. ಭಾನುವಾರ ಸಂಜೆ 4 ಗಂಟೆ ವೇಳೆಯೂ ಇಷ್ಟೇ ಪ್ರಮಾಣದಲ್ಲಿತ್ತು. ವಾಯು ಮಾಲಿನ್ಯ ತಡೆ ಕ್ರಮಗಳ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ 2 ದಿನಗಳ ಹಿಂದಷ್ಟೆ ಒಪ್ಪಿತ್ತು. ಇದರ ಬೆನ್ನಲ್ಲೇ, ದೆಹಲಿ ಸರ್ಕಾರ ಸೋಮವಾರ ಬೆಳಗ್ಗೆಯಿಂದಲೇ 4ನೇ ಹಂತದ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಘೋಷಿಸಿತು.
ಸೋಮವಾರ ಬೆಳಿಗ್ಗೆ 8 ರಿಂದಲೇ ರಾಜಧಾನಿಗೆ ಒಳಬರುವ ಭಾರೀ ವಾಹನಗಳು, ಟ್ರಕ್ಗಳ ಪ್ರವೇಶವನ್ನು ನಿಷೇಧಿಸಿತು. ನಿರ್ಮಾಣ ಕಾರ್ಯಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಕಳಪೆಯಲ್ಲಿ ಕಳಪೆ ದೆಹಲಿ ವಾಯು ಗುಣಮಟ್ಟ: ಶಾಲೆಗಳು ಬಂದ್, ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್