ನವದೆಹಲಿ: ಈಚೆಗೆ ನಡೆದ ಚಂಡೀಗಢ ಮೇಯರ್ ಚುನಾವಣಾ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಅಣಕವಾಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಚುನಾವಣಾ ಫಲಿತಾಂಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಕುಲದೀಪ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು.
ಚುನಾವಣೆಯ ದಿನದಂದು ಚಿತ್ರೀಕರಿಸಲಾದ ವಿಡಿಯೋವನ್ನು ಪರಿಶೀಲಿಸಿದ ಪೀಠವು, ರಿಟರ್ನಿಂಗ್ ಆಫೀಸರ್ (ಚುನಾವಣಾಧಿಕಾರಿ) ಬ್ಯಾಲೆಟ್ ಪೇಪರ್ಗಳನ್ನು ತಿದ್ದಿರುವುದು ಅದರಲ್ಲಿ ಕಂಡುಬಂದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಅಧಿಕಾರದ ದುರ್ಬಳಕೆ ಇದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಪ್ರಜಾಪ್ರಭುತ್ವದ ಅಣಕವಾಗಿದೆ. ಇದರಿಂದ ನಾವು ದಿಗಿಲುಗೊಂಡಿದ್ದೇವೆ ಎಂದು ಹೇಳಿದೆ.
ಅಧಿಕಾರಿಯ ವಿಚಾರಣೆ ನಡೆಸಿ: ಅಂದು ಚುನಾವಣೆಯ ಮೇಲ್ವಿಚಾರಣೆ ಮಾಡಿರುವ ಅಧಿಕಾರಿಯು ಮತ ಪತ್ರಗಳನ್ನು ವಿರೂಪಗೊಳಿಸುತ್ತಿರುವುದು ಸ್ಪಷ್ಟವಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಕಾನೂನು ಕ್ರಮ ಜರುಗಿಸಬೇಕು ಎಂದು ಇದೇ ವೇಳೆ ಸೂಚಿಸಿದರು.
ಅಧಿಕಾರಿ ಯಾಕೆ ಕ್ಯಾಮರಾ ನೋಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕವಲ್ಲವೇ?, ಅಧಿಕಾರಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ. ನಾವು ದಿಗ್ಭ್ರಮೆಗೊಂಡಿದ್ದೇವೆ. ಚುನಾವಣಾ ಅಧಿಕಾರಿಯ ನಡೆದುಕೊಳ್ಳುವ ರೀತಿಯೇ ಇದು ಎಂದು ಪ್ರಶ್ನಿಸಿದರು. ಬ್ಯಾಲೆಟ್ ಪೇಪರ್ನಲ್ಲಿ ಏನನ್ನೋ ಗೀಚುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಇಂತಹ ಕೃತ್ಯಗಳನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸುತ್ತದೆ ಎಂಬುದನ್ನು ಅಧಿಕಾರಿಗೆ ತಿಳಿಸಿ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪೀಠವು ಸೂಚಿಸಿತು.
ಈ ವೇಳೆ ಹಿರಿಯ ವಕೀಲ ಮಣಿಂದರ್ ಸಿಂಗ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಘಟನೆಯ ಸಂಪೂರ್ಣ ವಿಡಿಯೋವನ್ನು ಮರು ಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರಿದರು.
ದಾಖಲೆಗಳನ್ನು ಸಲ್ಲಿಸಿ: ಬ್ಯಾಲೆಟ್ ಪೇಪರ್‌ಗಳು, ಅಲ್ಲಿ ತೆಗೆಯಲಾದ ವಿಡಿಯೋಗ್ರಫಿ ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ದಾಖಲೆಗಳನ್ನು ಸಂರಕ್ಷಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ಗೆ ಸುಪ್ರೀಂಕೋರ್ಟ್ ಸೂಚಿಸಿತು. ಹೈಕೋರ್ಟ್‌ನ ರಿಜಿಸ್ಟ್ರಾರ್ ಅವರು ಮತಪತ್ರಗಳು ಮತ್ತು ವಿಡಿಯೋಗ್ರಫಿಯನ್ನು ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಏನಿದು ಪ್ರಕರಣ?: ಜನವರಿ 30ರಂದು ಚಂಡೀಗಢ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಎಎಪಿ ಕೌನ್ಸಿಲರ್ ಕುಲದೀಪ್ ಕುಮಾರ್ ಎಎಪಿ ಮೇಯರ್ ಅಭ್ಯರ್ಥಿಯಾಗಿದ್ದರು. ಇತ್ತ ಬಿಜೆಪಿಯಿಂದ ಮನೋಜ್ ಸೋಂಕರ್ ಸ್ಪರ್ಧಿಸಿದ್ದರು. ಕುಲದೀಪ್ ಕುಮಾರ್ 12 ಮತ ಪಡೆದರೆ, ಮನೋಜ್ ಸೋಂಕರ್ 16 ಮತಗಳನ್ನು ಗಳಿಸಿದರು. 8 ಮತಗಳು ಅಸಿಂಧು ಎಂದು ಚುನಾವಣಾಧಿಕಾರಿ ಘೋಷಿಸಿದ್ದರು.
ಚುನಾವಣಾಧಿಕಾರಿ ಬೇಕಂತಲೇ 8 ಮತಗಳನ್ನು ಅಸಿಂಧುಗೊಳಿಸಿದ್ದಾರೆ. ಚುನಾವಣಾ ನಿಯಮಗಳ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ವಿಡಿಯೋಗ್ರಫಿಯಲ್ಲಿ ಅಧಿಕಾರಿ ಕ್ಯಾಮೆರಾದ ಕಡೆಗೆ ನೋಡುತ್ತಿರುವುದು ಕಂಡುಬಂದಿತ್ತು.
ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ ಗೆದ್ದ ಬಿಜೆಪಿ: ಹೈಕೋರ್ಟ್ ಮೊರೆ ಹೋದ ಎಎಪಿ-ಕಾಂಗ್ರೆಸ್