ನವದೆಹಲಿ: ಜಾಮೀನು ಅವಧಿ ವಿಸ್ತರಣೆ ಕೋರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ. ಈ ಬಗ್ಗೆ ಮುಂದೆ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದೆ.
ಅಬಕಾರಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನಕ್ಕೀಡಾಗಿರುವ ದೆಹಲಿ ಸಿಎಂ ಸದ್ಯ ಮಧ್ಯಂತರ ಜಾಮೀನು ಪಡೆದು ಹೊರಗಿದ್ದಾರೆ. ಇದೀಗ ಜೂನ್ 2 ರಂದು ಮತ್ತೆ ಜೈಲು ಅಧಿಕಾರಿಗಳ ಎದುರು ಶರಣಾಗಬೇಕಿದೆ. ಅನಾರೋಗ್ಯ ಕಾರಣ ನೀಡಿ 7 ದಿನಗಳ ಜಾಮೀನು ಅವಧಿ ವಿಸ್ತರಣೆ ಮಾಡಬೇಕು ಎಂದು ಅವರು ಸೋಮವಾರ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಇಂದು ನಡೆದ ವಾದದಲ್ಲಿ ಜಾಮೀನು ಅರ್ಜಿಯನ್ನು ತುರ್ತು ವಿಚಾರಣೆಗೆ ಒಳಪಡಿಸಬೇಕು ಎಂದು ಅರವಿಂದ್ ಕೇಜ್ರಿವಾಲ್ ಅವರ ಪರ ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರು ನ್ಯಾಯಪೀಠಕ್ಕೆ ಕೋರಿದರು. ಆದರೆ, ಇದನ್ನು ನಿರಾಕರಿಸಿದ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಮುಂದೆ ವಿಚಾರಣೆ ನಡೆಸಲಾಗುವುದು ಎಂದಿತು.
ಆದರೆ, ಇದು ರಾಜ್ಯದ ಸಿಎಂ ಒಬ್ಬರ ಅರ್ಜಿಯಾಗಿದೆ. ತುರ್ತು ಅನಾರೋಗ್ಯದ ಕಾರಣ ಅರ್ಜಿಯನ್ನು ನಾಳೆಗೆ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ವಾದಿಸಿದರು. ಆದರೆ, ದೆಹಲಿ ಸಿಎಂ ವಿರುದ್ಧದ ಅರ್ಜಿ ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಹೀಗಾಗಿ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಮುಖ್ಯ ನ್ಯಾಯಮೂರ್ತಿಗಳ ಬಳಿಗೆ ಕಳುಹಿಸಲಾಗುವುದು. ಸಿಜೆಐ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪೀಠ ಹೇಳಿತು.
ಜೂನ್ 2 ರಂದು ಶರಣಾಗತಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ಹಗರಣದಲ್ಲಿ ಬಂಧಿತರಾದ 50 ದಿನಗಳ ಬಳಿಕ ಮೇ 10 ರಂದು 21 ದಿನಗಳ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಜೂನ್ 1ಕ್ಕೆ ಅದರ ಅವಧಿ ಮುಗಿಯಲಿದೆ. ಜೂನ್ 2 ಮಧ್ಯಾಹ್ನದ ಒಳಗೆ ಅವರು ತಿಹಾರ್ ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಸುಪ್ರೀಂಕೋರ್ಟ್ ಷರತ್ತು ವಿಧಿಸಿದೆ.
ಕೇಜ್ರಿವಾಲ್ ವಿರುದ್ಧ ಬಿಜೆಪಿ ಟೀಕೆ: ಜಾಮೀನು ಅವಧಿಯನ್ನು ವಿಸ್ತರಣೆ ಕೋರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಬಿಜೆಪಿ ಗರಂ ಆಗಿದೆ. ಅನಾರೋಗ್ಯ ಕಾರಣ ನೀಡಿ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಸಿಎಂ ಕೇಜ್ರಿವಾಲ್ ಸುಪ್ರೀಂಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ನಿಜವಾಗಿಯೂ ಅನಾರೋಗ್ಯವಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ಯಾಕೆ ಎಂದು ಪ್ರಶ್ನಿಸಿದೆ. ಇದೀಗ ಮತ್ತೆ ಜೈಲು ಶಿಕ್ಷೆಗೆ ಒಳಗಾಗಬೇಕಾದ ಕಾರಣ, ಅದರಿಂದ ತಪ್ಪಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಅನಾರೋಗ್ಯದ ಕಾರಣ ಒಂದು ವಾರ ಜಾಮೀನು ಅವಧಿ ವಿಸ್ತರಿಸಿ: ಸುಪ್ರೀಂಕೋರ್ಟ್ಗೆ ಕೇಜ್ರಿವಾಲ್ ಮನವಿ - arvind kejriwal