ನವದೆಹಲಿ: ವಿಚ್ಚೇದಿತ ಪತ್ನಿಗೆ, ಪತಿಯಿಂದ ಸಿಗುವ ಪರಿಹಾರದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಾತಿ, ಧರ್ಮ ಎನ್ನದೇ ಎಲ್ಲ ಮಹಿಳೆಯರೂ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಬುಧವಾರ ತೀರ್ಪು ನೀಡಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯೂ ತನ್ನ ಪರಿತ್ಯಕ್ತ ಪತಿಯಿಂದ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಬಹುದು. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986ರ ನಿಯಮವು ಇದಕ್ಕೆ ವರ್ಧಿಸುವುದಿಲ್ಲ ಎಂದು ಹೇಳಿದೆ.
ಮುಸ್ಲಿಂ ಕಾನೂನಿನ ಪ್ರಕಾರ, ಆ ಮತದ ಮಹಿಳೆಯರು ಪರಿತ್ಯಕ್ತ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂಬ ನಿಯಮವು ಸೆಕ್ಷನ್ 125 ರ ವಿರುದ್ಧವಾಗಿದೆ. ಜೀವನಾಂಶ ಪಡೆಯುವುದು ಮಹಿಳೆಯರ ಹಕ್ಕಾಗಿದೆ. ಸಾಮಾನ್ಯ ಕಾನೂನಿನ ಪ್ರಕಾರ ಮುಸ್ಲಿಂ ಮಹಿಳೆಯೂ ಇದಕ್ಕೆ ಅರ್ಹಳು ಎಂದು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ಹೇಳಿದೆ. ಇಬ್ಬರೂ ಜಡ್ಜ್ಗಳು ಪ್ರತ್ಯೇಕವಾಗಿ ತೀರ್ಪು ನೀಡಿದ್ದರೂ, ಏಕಮತವಾದ ಆದೇಶ ಬಂದಿದೆ.
ಪ್ರಕರಣ ಹಿನ್ನೆಲೆ: ತೆಲಂಗಾಣಕ್ಕೆ ಸೇರಿದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪತ್ನಿಗೆ 10 ಸಾವಿರ ರೂಪಾಯಿ ಮಧ್ಯಂತರ ಜೀವನಾಂಶವನ್ನು ಪಾವತಿಸಲು ಸೂಚಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ ಕೋರ್ಟ್, ತೆಲಂಗಾಣ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು.
ಅರ್ಜಿದಾರ ಸಲ್ಲಿಸಿದ ಮೇಲ್ಮನವಿಯಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಯು ಸಿಆರ್‌ಪಿಸಿಯ ಸೆಕ್ಷನ್ 125 ರ ಅಡಿ ಜೀವನಾಂಶ ಕೋರಲು ಅವಕಾಶವಿಲ್ಲ. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986 ಪ್ರಕಾರ, ಮುಸ್ಲಿಂ ಮಹಿಳೆಗೆ ಈ ಹಕ್ಕಿಲ್ಲ ಎಂದು ವಾದಿಸಿದ್ದರು.
ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ವಾದಿಸಿ, ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986, ಸಿಆರ್‌ಪಿಸಿಯ ಸೆಕ್ಷನ್ 125 ಕ್ಕಿಂತಲೂ ಉತ್ತಮವಾಗಿದೆ. ಅದರ ಪ್ರಕಾರ ಅವರು ಜೀವನಾಂಶ ಕೋರಬಹುದು. ಸಿಆರ್‌ಪಿಸಿ ನಿಯಮಗಳು ಮುಸ್ಲಿಂ ಮಹಿಳೆಗೆ ವರ್ಧಿಸುವುದಿಲ್ಲ ಎಂದಿದ್ದರು.
ಕೋರ್ಟ್ ಹೇಳಿದ್ದೇನು?: 1985 ರಲ್ಲಿ ಶಾ ಬಾನೋ ತೀರ್ಪಿನ ನಂತರ ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ ಬದಲಿಸಲಾಗಿದೆ. ವಿಚ್ಛೇದನದ ನಂತರ ಪತಿಯಿಂದ ಮುಸ್ಲಿಂ ಮಹಿಳೆ ಸೇರಿದಂತೆ ಎಲ್ಲ ಮಹಿಳೆಯರೂ ಜೀವನಾಂಶವನ್ನು ಸಿಆರ್‌ಪಿಸಿ ಅಡಿ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಹೀಗಾಗಿ ಮೇಲ್ಮನವಿ ವಜಾ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಇದನ್ನೂ ಓದಿ: ಸಂತ್ರಸ್ತೆಯ ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್ - Bhavani Revanna