ಲಕ್ನೋ: ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಆದಿತ್ಯ ಶ್ರೀವಾತ್ಸವ್ ಮೊದಲ ರ್ಯಾಂಕ್ ಗಳಿಸಿದ್ದಾರೆ. ಈ ಫಲಿತಾಂಶ ಕುಟುಂಬದಲ್ಲಿ ಯಾವ ರೀತಿ ಸಂತಸ ತಂದಿದೆ ಎಂಬ ಕುರಿತು ಅವರ ತಂದೆ ಅಜಯ್ ಶ್ರೀವಾತ್ಸವ್ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಫಲಿತಾಂಶವನ್ನು ಮನೆಯಲ್ಲಿ ಹೇಳಿದಾಕ್ಷಣ ಪ್ರತಿಯೊಬ್ಬರು ಆನಂದ ಭಾಷ್ಪದಲ್ಲಿ ಮಿಂದೆದ್ದರು ಎಂದಿದ್ದಾರೆ.
ಫಲಿತಾಂಶ ಬಿಡುಗಡೆಯಾಗುವ ಮುನ್ನ ಆದಿತ್ಯ ಕರೆ ಮಾಡುವ 10 ನಿಮಿಷ ಮುನ್ನ ನಾನು ವೆಬ್ಸೈಟ್ ಚೆಕ್ ಮಾಡಿದೆ. ಅಲ್ಲಿಯವರೆಗೆ ಫಲಿತಾಂಶ ಬಂದಿರಲಿಲ್ಲ. ಇದಾದ ಬಳಿಕ ಆದಿತ್ಯ ವಾಟ್ಸಾಪ್ ಕರೆ ಮಾಡಿ, ಪಪ್ಪಾ, ಇದು ನೀರೀಕ್ಷೆಗಿಂತ ಹೆಚ್ಚಾಯಿತು ಎಂದ. ಆಗ ನನಗೆ ಅರ್ಥವಾಗಲಿಲ್ಲ. ಬಳಿಕ ಆಲ್ ಇಂಡಿಯಾ ರ್ಯಾಂಕಿಂಗ್ ಲಿಸ್ಟ್ನಲ್ಲಿ ಮೊದಲ ಸ್ಥಾನ ಪಡೆದಿರುವುದಾಗಿ ತಿಳಿಸಿದ. ಈ ಮಾತನ್ನು ಕೇಳಿದ ಬಳಿಕ ನಮ್ಮ ಮನೆಯಲ್ಲಿ ಸಂತೋಷದ ಅಲೆ ತೇಲಿತು ಎಂದು ಸಂಭ್ರಮದ ಕ್ಷಣದ ಕುರಿತು ಆದಿತ್ಯ ತಿಳಿಸಿದ್ದಾರೆ.
ಟಾಪ್ 5 ಅಲ್ಲಿ ನಿರೀಕ್ಷೆ: ಆದಿತ್ಯ ಶ್ರೀವಾತ್ಸವ್ ತಾಯಿ ಅಬಾ ಶ್ರೀವಾತ್ಸವ್ ಮಾತನಾಡಿ, ನಮ್ಮ ಮಗ ಐಎಎಸ್ ಆಗುತ್ತಾನೆ ಎಂಬ ನಿರೀಕ್ಷೆ ಇತ್ತು. ಆದಿತ್ಯ ಟಾಪ್ 5ರೊಳಗೆ ಬರುತ್ತಾನೆ ಎಂದುಕೊಂಡಿದ್ದೆವು. ಆದರೆ, ಫಲಿತಾಂಶ ಬಂದಾಗ ಆತ ಮೊದಲ ರ್ಯಾಂಕ್ ಪಡೆದಿದ್ದ. ನಮಗೆ ನಂಬಲು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೂ ಆದಿತ್ಯ ಓದಿನಲ್ಲಿ ಚುರುಕಾಗಿದ್ದ, 10 ಮತ್ತು 12ನೇ ತರಗತಿಯಲ್ಲಿ ಆತ ಟಾಪರ್ ಆಗಿದ್ದ. ಇದಾದ ಬಳಿಕ ಆತ ಐಐಟಿಗೆ ಆಯ್ಕೆಯಾಗಿ ಐಐಟಿ ಕಾನ್ಪುರ್ನಲ್ಲಿ ಓದಲು ಹೋದ. ಬಳಿಕ ಸಿವಿಲ್ ಸರ್ವಿಸ್ ಸೇರಲು ನಿರ್ಧರಿಸಿ, ಈ ಮೊದಲು ಐಪಿಎಸ್ ಆಗಿ ಆಯ್ಕೆಯಾಗಿದ್ದ.
ಐಪಿಎಸ್ ಅಲ್ಲ, ಐಎಎಸ್ ಕನಸು: ಕಳೆದ ಬಾರಿ ಆದಿತ್ಯ ಯುಪಿಎಸ್ಸಿಯಲ್ಲಿ 236ನೇ ರ್ಯಾಂಕ್ ಪಡೆದು ಐಪಿಎಸ್ ಆಗಿ ಆಯ್ಕೆಯಾದ. ಈ ಫಲಿತಾಂಶ ಆತನಿಗೆ ಸಂತಸ ತಂದಿರಲಿಲ್ಲ. ಆದಾಗ್ಯೂ ಆತ ಐಪಿಎಸ್ ತರಬೇತಿ ತೆಗೆದುಕೊಂಡ. ಆತನ ಗುರಿ ಐಎಎಸ್ ಆಗಿತ್ತು. ಇದೀಗ ಮೊದಲ ಸ್ಥಾನ ಪಡೆದಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ. ಐಐಟಿ ಶಿಕ್ಷಣದ ಬಳಿಕ ಆತ 1.5 ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ ಎಂದು ತಿಳಿಸಿದರು.
ಆದಿತ್ಯ ತಂದೆ ಕೂಡ ಕೇಂದ್ರ ಆಡಿಟ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆತನ ತಾಯಿ ಗೃಹಿಣಿಯಾಗಿದ್ದಾರೆ.
ಕೋಚಿಂಗ್ ಇಲ್ಲದೇ ಪಾಸ್: ಆದಿತ್ಯ ಬಾಲ್ಯದಿಂದಲೇ ಚುರುಕಾಗಿದ್ದ. ಈ ಹಿನ್ನೆಲೆ ಆತನನ್ನು ಸಿವಿಲ್ ಸರ್ವಿಸ್ಗೆ ಸಿದ್ಧತೆ ನಡೆಸುವ ಕುರಿತು ನಾವು ಕೂಡ ಪ್ರೋತ್ಸಾಹಿಸಿದೆವು. ತಮ್ಮ ಸೋದರ ಸಂಬಂಧಿ ಐಎಎಸ್ ಆಗಿದ್ದು, ಅವರಿಂದ ಕೂಡ ಆದಿತ್ಯ ಪ್ರೇರಣೆ ಪಡೆದ. ಆದಿತ್ಯನ ಕಠಿಣ ಶ್ರಮ ಇದೀಗ ಫಲಿತಾಂಶ ರೂಪದಲ್ಲಿ ಎಲ್ಲರಿಗೂ ಕಾಣುತ್ತಿದೆ ಎಂದು ಆದಿತ್ಯ ತಂದೆ ಅಜಯ್ ಶ್ರೀವಾತ್ಸವ್ ಸಂತಸ ಹಂಚಿಕೊಂಡರು.
ತಂಗಿಯಿಂದಲೂ ತಯಾರಿ: ಆದಿತ್ಯನ ಸಹೋದರಿ ಕೂಡ ಇದೀಗ ಐಎಎಸ್ ಗುರಿ ಹೊಂದಿದ್ದು, ಇದಕ್ಕಾಗಿ ದೆಹಲಿಯಲ್ಲಿ ಸಿದ್ಧತೆ ನಡೆಸುತ್ತಿದ್ದಾಳೆ. ಆಕೆ ಕೂಡ ಸಿವಿಲ್ ಸರ್ವಿಸ್ ಪರೀಕ್ಷೆ ಎದುರಿಸಿ ಐಎಎಸ್ ಆಗುತ್ತಾಳೆ ಎಂಬ ನಿರೀಕ್ಷೆ ಇದೆ ಎಂದು ಅಜಯ್ ಶ್ರೀವಾತ್ಸವ್ ವಿಶ್ವಾಸ ವ್ಯಕ್ತಪಡಿಸಿದರು.
ಡೈನೋಸಾರ್ ಬಗ್ಗೆ ಕುತೂಹಲ: ಆದಿತ್ಯನಿಗೆ ಓದು, ಕ್ರಿಕೆಟ್, ಹಾಡು ಕೇಳುವುದು ಬಿಟ್ಟು, ಮತ್ತೊಂದು ವಿಶೇಷ ಹವ್ಯಾಸ ಇದೆ. ಆತನಿಗೆ ಡೈನೋಸಾರ್ಗಳ ಬಗ್ಗೆ ಆಸಕ್ತಿ ಇದೆ. ಈ ಕಾರಣದಿಂದ ಆತ ಡೈನೋಸಾರ್ಗಳ ಕುರಿತು ಮಾಹಿತಿ ಸಂಗ್ರಹಿಸಿ, ಸಂಶೋಧನೆ ನಡೆಸಿದ್ದಾನೆ. ಬಿಡುವಿದ್ದಾಗ ಆತ ಡೈನೋಸಾರ್ ಕುರಿತ ಪುಸ್ತಕಗಳನ್ನು ಓದುತ್ತಾನೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಯುಪಿಎಸ್ಸಿ ಪರೀಕ್ಷೆಯಲ್ಲಿ 101ನೇ ರ‍್ಯಾಂಕ್ ಪಡೆದ ಸೌಭಾಗ್ಯ: ಕೋಚಿಂಗ್ಗೆಂದು ಹತ್ತು ಪೈಸೆಯೂ ಖರ್ಚು ಮಾಡಿಲ್ಲ ಎಂದ ಪೋಷಕರು