ಅಹಮದಾಬಾದ್(ಗುಜರಾತ್): ಗುಜರಾತ್ ವಿಶ್ವವಿದ್ಯಾಲಯದ ನಾಲ್ವರು ವಿದೇಶಿ ವಿದ್ಯಾರ್ಥಿಗಳ ಮೇಲೆ ಕಳೆದ ರಾತ್ರಿ ಹಲ್ಲೆ ನಡೆದಿದೆ. ಉಜ್ಬೇಕಿಸ್ತಾನ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಈ ಸಂಬಂಧ ಸಮಗ್ರ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
''ನಮ್ಮ ಹಾಸ್ಟೆಲ್ ಕ್ಯಾಂಪಸ್‌ನಲ್ಲಿ ಮಸೀದಿ ಇಲ್ಲದ ಕಾರಣ ರಂಜಾನ್‌ನಲ್ಲಿ ರಾತ್ರಿ ಪ್ರಾರ್ಥನೆ 'ತರಾವೀಹ್' ಮಾಡುತ್ತಿದ್ದೆವು. ಈ ವೇಳೆ ಗುಂಪೊಂದು ದೊಣ್ಣೆಗಳ ಸಮೇತ ಏಕಾಏಕಿ ಹಾಸ್ಟೆಲ್‌ಗೆ ನುಗ್ಗಿ ಕೊಠಡಿಗಳನ್ನು ಧ್ವಂಸಗೊಳಿಸಿತು. ನಮ್ಮ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು ಮತ್ತು ಬೈಕ್‌ಗಳಿಗೆ ಹಾನಿ ಮಾಡಲಾಗಿದೆ" ಎಂದು ಗಾಯಗೊಂಡ ವಿದ್ಯಾರ್ಥಿಗಳು ಹೇಳಿದರು.
"ಹಾಸ್ಟೆಲ್‌ನ ಬ್ಲಾಕ್-ಎ ಮೇಲೆ ಗುಂಪಿನಲ್ಲಿದ್ದ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿ, 'ಜೈ ಶ್ರೀರಾಮ್' ಎಂದು ಘೋಷಣೆಗಳನ್ನು ಕೂಗಿದ್ದಾರೆ. ವಿದ್ಯಾರ್ಥಿಗಳು ಹಾಸ್ಟೆಲ್‌ನೊಳಗೆ ನಮಾಜ್ ಮಾಡಿರುವುದನ್ನು ಟೀಕಿಸಿದ ಗುಂಪಿನ ಜನರು, ನಿಮಗೆ ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದರು. ಈ ವೇಳೆ ಗುಂಪಿನಲ್ಲಿದ್ದ ವ್ಯಕ್ತಿಗಳ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಘಟನೆಯಲ್ಲಿ ನಾಲ್ವರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಎಸ್‌ವಿಪಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ವಲ್ಪ ಸಮಯದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ತಡರಾತ್ರಿ ಘಟನೆ ನಡೆದಿದ್ದು, ತನಿಖೆ ಆರಂಭಿಸಲಾಗಿದೆ" ಎಂದು ಇನಸ್ಪೆಕ್ಟರ್ ಎಸ್.ಆರ್.ಬಾವಾ ಮಾಹಿತಿ ನೀಡಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಜಮಾಲ್‌ಪುರ ಶಾಸಕ ಇಮ್ರಾನ್ ಖೇದವಾಲಾ ಮತ್ತು ಮಾಜಿ ಶಾಸಕ ಘಿಯಾಸುದ್ದೀನ್ ಶೇಖ್ ಸ್ಥಳಕ್ಕೆ ಆಗಮಿಸಿ ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಹೈದರಾಬಾದ್ ಸಂಸದ, ಆಲ್ ಇಂಡಿಯಾ ಮಜಿಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, "ದೇಶೀಯ ಮುಸ್ಲಿಂ ವಿರೋಧಿ ದ್ವೇಷವು ಭಾರತದ ಒಳ್ಳೆಯತನವನ್ನು ನಾಶಪಡಿಸುತ್ತಿದೆ" ಎಂದು ಘಟನೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಕ್ಷೇತ್ರದ ಅಭ್ಯರ್ಥಿಗೆ ಕ್ರಿಮಿನಲ್ ಹಿನ್ನೆಲೆ ಇದೆಯೇ?, ಆಸ್ತಿ ಎಷ್ಟಿದೆ? ಹೀಗೆ ತಿಳಿಯಿರಿ