ನೌಶೇರಾ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಜೈಲುಗಳಲ್ಲಿರುವ ಯಾವುದೇ ಕಲ್ಲು ತೂರಾಟಗಾರ ಅಥವಾ ಭಯೋತ್ಪಾದಕರನ್ನು ಬಿಡುಗಡೆ ಮಾಡುವುದಿಲ್ಲ ಹಾಗೂ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವವರೆಗೂ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರನ್ನು ಬೆಂಬಲಿಸಿ ನೌಶೇರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಶಾ, ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಸಿಂಹಗಳಿಗೆ ಹೋಲಿಸಿ, ಅವರೊಂದಿಗೆ ಸಂವಾದ ನಡೆಸಲು ಬಯಸುವುದಾಗಿ ತಿಳಿಸಿದರು.
"ಒಂದು ವೇಳೆ ಎನ್ಸಿ- ಕಾಂಗ್ರೆಸ್ ಮೈತ್ರಿಕೂಟವು ಅಧಿಕಾರಕ್ಕೆ ಬಂದಲ್ಲಿ, ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಕಲ್ಲು ತೂರಾಟಗಾರರು ಮತ್ತು ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಲು ಬಯಸುತ್ತಾರೆ. ಜಮ್ಮುವಿನ ಬೆಟ್ಟಗಳಲ್ಲಿ ಭಯೋತ್ಪಾದನೆಯು ಮತ್ತೆ ಕಾಣಿಸಿಕೊಂಡಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳುತ್ತಿದ್ದಾರೆ. ಆದರೆ ಇದು ಮೋದಿ ಸರ್ಕಾರ ಮತ್ತು ನಾವು ಭಯೋತ್ಪಾದನೆಯನ್ನು ಪಾತಾಳದಲ್ಲಿ ಹೂಳುತ್ತೇವೆ ಎಂದು ನಾನು ಅವರಿಗೆ ತಿಳಿಸಲು ಬಯಸುತ್ತೇನೆ. ಯಾವುದೇ ಕಲ್ಲು ತೂರಾಟಗಾರ ಅಥವಾ ಭಯೋತ್ಪಾದಕರನ್ನು ಬಿಡುಗಡೆ ಮಾಡುವುದಿಲ್ಲ" ಎಂದು ಅವರು ಹೇಳಿದರು.
"ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸುವಂತೆ ಎನ್ಸಿ ಮತ್ತು ಕಾಂಗ್ರೆಸ್ ಬಯಸುತ್ತಿವೆ. ಆದರೆ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವವರೆಗೂ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ನಾನು ಫಾರೂಕ್ ಅಬ್ದುಲ್ಲಾ ಮತ್ತು ರಾಹುಲ್ ಗಾಂಧಿ ಅವರಿಗೆ ಹೇಳಲು ಬಯಸುತ್ತೇನೆ. ನಾನು ನನ್ನ ಸಿಂಹಗಳೊಂದಿಗೆ (ಜಮ್ಮು ಮತ್ತು ಕಾಶ್ಮೀರದ ಯುವಕರು) ಮಾತನಾಡುತ್ತೇನೆಯೇ ಹೊರತು ಪಾಕಿಸ್ತಾನದೊಂದಿಗೆ ಅಲ್ಲ" ಎಂದು ಅಮಿತ್ ಶಾ ನುಡಿದರು.
"ಗಡಿ ನಿವಾಸಿಗಳ ಸುರಕ್ಷತೆಗಾಗಿ ಸರ್ಕಾರವು ವರ್ಷಗಳಿಂದ ನಿರ್ಮಿಸಿದ ಭೂಗತ ಬಂಕರ್ ಗಳನ್ನು ಉಲ್ಲೇಖಿಸಿದ ಅವರು, ಗಡಿಯಾಚೆಯಿಂದ ಗುಂಡು ಹಾರಿಸುವ ಅಧಿಕಾರ ಯಾರಿಗೂ ಇಲ್ಲದ ಕಾರಣ ಅಂಥ ಬಂಕರ್ಗಳ ನಿರ್ಮಾಣ ಅಗತ್ಯವಿಲ್ಲ. ಪಾಕಿಸ್ತಾನದ ಕಡೆಯಿಂದ ಗುಂಡು ಹಾರಿ ಬಂದರೆ ಅದಕ್ಕೆ ನಾವು ಫಿರಂಗಿಯಿಂದ ಉತ್ತರ ನೀಡುತ್ತೇವೆ" ಎಂದು ಅವರು ಹೇಳಿದರು.
ಮೀಸಲಾತಿ ಕುರಿತು ಎನ್ಸಿ-ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಟೀಕಿಸಿದ ಅವರು ಪಹಾರಿಗಳು, ಗುಜ್ಜರ್ಗಳು, ದಲಿತರು, ಇತರ ಹಿಂದುಳಿದ ವರ್ಗಗಳು ಸೇರಿದಂತೆ ವಂಚಿತ ವರ್ಗಗಳಿಗೆ ನೀಡಲಾಗುವ ಮೀಸಲಾತಿಯನ್ನು ಮುಟ್ಟಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.