ನವದೆಹಲಿ: ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಹಿನ್ನೆಲೆಯಲ್ಲಿ ಸೋಮವಾರ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಇನ್ನು ದೇಗುಲಗಳಲ್ಲಿ ವಿಶೇಷ ಭಜನೆ ಮತ್ತು ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನೊಂದೆಡೆ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಪಾಟ್ನಾದ ಇಸ್ಕಾನ್ ದೇಗುಲದಲ್ಲಿ ಭಕ್ತರು ಅಪಾರ ಪ್ರಮಾಣದಲ್ಲಿ ಹರಿದು ಬಂದಿದ್ದರು. ಪರಿಣಾಮ ಕಾಲ್ತುಳಿತದಂತಹ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಭಾರಿ ಜನಸ್ತೋಮದ ಹಿನ್ನೆಲೆ ಕೆಲವು ಭಕ್ತರು ಸಣ್ಣಪುಟ್ಟ ಗಾಯಗಳಿಗೆ ಒಳಗಾದರು. ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣ ತರುವಲ್ಲಿ ಯಶಸ್ವಿ ಕೂಡಾ ಆದರು. ಪಾಟ್ನಾದ ಎಸ್ಎಸ್ಪಿ ರಾಜೀವ್ ಮಿಶ್ರಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ದೇಗುಲಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರವನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಪೊಲೀಸರ ಈ ಸಾಹಸದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಸ್ಕಾನ್ಗೆ ಭಾರಿ ಪ್ರಮಾಣದಲ್ಲಿ ಭಕ್ತಗಣ ಹರಿದು ಬಂದಿದ್ದರಿಂದ ಕೆಲವು ಜನರು ನುಕುನುಗ್ಗಲಿಗೆ ಒಳಗಾಗಿ ಕೆಳಗೆ ಬಿದ್ದಿದ್ದು ರಕ್ಷಣಾ ಸಿಬ್ಬಂದಿ ತಕ್ಷಣ ಅವರ ಸಹಾಯಕ್ಕೆ ಆಗಮಿಸಿ, ರಕ್ಷಣೆ ಮಾಡಿದರು.
ಮುನ್ನೆಚ್ಚರಿಕೆ ವಹಿಸಿದರೂ ನಿಯಂತ್ರಣಕ್ಕೆ ಹರಸಾಹಸ: ಜನ್ಮಾಷ್ಠಮಿ ನಿಮಿತ್ತ ಸೋಮವಾರ ಸಂಜೆ ದೇಶದೆಲ್ಲೆಡೆ ಇಸ್ಕಾನ್ ದೇಗುಲಕ್ಕೆ ಭಕ್ತರು ಹರಿದು ಬಂದರು. ಪಾಟ್ನಾದ ಇಸ್ಕಾನ್ನಲ್ಲೂ ನಿರೀಕ್ಷೆಗೆ ಮೀರಿದ ಜನರು ಆಗಮಿಸಿದ್ದರು. ಭಾರಿ ಪ್ರಮಾಣದಲ್ಲಿ ಭಕ್ತರು ದೇವಾಲಯಕ್ಕೆ ಹರಿದು ಬರುವ ನಿರೀಕ್ಷೆ ಹಿನ್ನೆಲೆ ಅಗತ್ಯಕ್ಕೆ ಅನುಗುಣವಾಗಿ ಈ ಮೊದಲೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದು ಕಷ್ಟವಾಯಿತು. ಆದರೂ ಮುನ್ನೆಚ್ಚರಿಕೆವಹಿಸಿ ಮತ್ತಷ್ಟು ಜನರನ್ನು ಭದ್ರತೆಗೆ ನಿಯೋಜಿಸುವ ಮೂಲಕ ಭಕ್ತರು ಸುರಕ್ಷಿತವಾಗಿ ಹೊರ ಹೋಗಲು ಮತ್ತೊಂದು ಮಾರ್ಗವನ್ನು ಕಲ್ಪಿಸಲಾಯಿತು. ಇದು ಭದ್ರತಾ ಸಿಬ್ಬಂದಿಗೂ ಕಿರಿಕಿರಿಯನ್ನುಂಟು ಮಾಡಿತು. ಹೇಗೋ ತಕ್ಷಣಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಇಲ್ಲದೇ ಹೋದಲ್ಲಿ ಕಾಲ್ತುಳಿತಗಳು ಸಂಭವಿಸುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಪಾಟ್ನಾ ಜಿಲ್ಲಾಡಳಿತ, ಇಸ್ಕಾನ್ ದೇಗುಲದಲ್ಲಿ ಯಾವುದೇ ರೀತಿ ಕಾಲ್ತುಳಿತ ಸಂಭವಿಸಿಲ್ಲ. ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ದೇವಾಲಯದ ಆವರಣಕ್ಕೆ ಪ್ರವೇಶಿಸಲು ಯತ್ನಿಸಿದ ಭಕ್ತರನ್ನು ನಿಯಂತ್ರಣಕ್ಕೆ ತರಲಾಯಿತು. ಈ ವೇಳೆ ತುಸು ಬಲ ಪ್ರಯೋಗ ಮಾಡಬೇಕಾಯಿತು ಎಂದು ಹೇಳಿದೆ.
ಈ ತಿಂಗಳ ಆರಂಭದಲ್ಲಿ ಬಿಹಾರದ ಜೆಹಾನಾಬಾದ್ ಜಿಲ್ಲೆಯ ಬಾಬಾ ಸಿದ್ಧೇಶ್ವರ ನಾಥ ದೇವಾಲಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿ, 16 ಮಂದಿ ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಥುರಾಕ್ಕೆ ಭೇಟಿ ನೀಡಿದ 25 ಲಕ್ಷ ಭಕ್ತರು: ಜನ್ಮಾಷ್ಠಮಿ ಹಿನ್ನೆಲೆ ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಮಥುರಾ, ವೃಂದಾವನ, ಗೋವರ್ಧನ, ಮಹಬನ್ನಲ್ಲಿ ಸೋಮವಾರ ರಾತ್ರಿವರೆಗೆ ಸರಿ ಸುಮಾರು 25 ಲಕ್ಷ ಯಾತ್ರಿಗಳು ಭೇಟಿ ನೀಡಿ ಕೃಷ್ಣ ನಾಮ ಜಪಿಸಿದರು.
ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಾಷ್ಟಮಿ 2024: ದೇಶದೆಲ್ಲೆಡೆ 'ಗೋವಿಂದ'ನ ಜಪ; ಮಥುರಾದಲ್ಲಿ 'ರಾಧೇಶ್ಯಾಮ'ನಿಗೆ ವಿಶೇಷ ಆರತಿ