ಜೈಪುರ/ಬೆಂಗಳೂರು: ಭಾರತೀಯ ಯುವ ಸಂಸತ್ನ 27ನೇ ರಾಷ್ಟ್ರೀಯ ಅಧಿವೇಶನ ರಾಜಸ್ಥಾನದ ಜೈಪುರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿದ್ದು, ಮುಖ್ಯ ಅತಿಥಿಯಾಗಿ ರಾಜ್ಯ ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಭಾಗವಹಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಸ್ಪೀಕರ್ ಖಾದರ್, ''ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಸಂತೋಷವಾಗಿದೆ. ಮೀಡಿಯಾ ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಪ್ರತಿ ವರ್ಷವೂ ಈ ಅಧಿವೇಶನ ನಡೆಸಲಾಗುತ್ತಿದೆ. ರಾಷ್ಟ್ರದ ವಿವಿಧ ರಾಜ್ಯಗಳಿಂದ ಯುವ ಪ್ರತಿಭೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಮಾಜದ ವಿವಿಧ ಹಂತಗಳಲ್ಲಿ ಭವಿಷ್ಯದ ಜನಾಂಗದ ಪಾತ್ರವೇನು ಎಂಬುದರ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಆಯೋಜಕರನ್ನು ಅಭಿನಂದಿಸುತ್ತೇನೆ. ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಲಿ'' ಎಂದು ಹಾರೈಸಿದರು.
''ಕಾರ್ಯಕ್ರಮವು ಸಮಾಜಕ್ಕೆ ಮಾದರಿಯಾಗಲಿ. ಭವಿಷ್ಯದ ದಿನಗಳಲ್ಲಿ ಭಾರತವು ವಿಶ್ವದ ಬಲಿಷ್ಠ ರಾಷ್ಟ್ರವಾಗಿ, ಪ್ರಥಮ ಸ್ಥಾನಕ್ಕೇರಲು ಪ್ರೇರಣೆಯಾಗಲಿ'' ಎಂದರು. ''ಎಲ್ಲರಿಗೂ ಪ್ರಜಾಪ್ರಭುತ್ವ ದಿನದ ಶುಭಾಶಯಗಳು. ಪ್ರಜಾಪ್ರಭುತ್ವ ಎಂಬ ಸಂಪತ್ತನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ಸಮಾಧಾನ, ನೆಮ್ಮದಿಯ ಜೀವನ ನಡೆಸಲು ಅಗತ್ಯ ವಾತಾವರಣ ನಿರ್ಮಿಸುವುದು ಪ್ರಜಾಪ್ರಭುತ್ವದ ಉದ್ದೇಶವಾಗಿದೆ. ಅದರ ಅನುಷ್ಠಾನಕ್ಕೆ ನಾವೆಲ್ಲರೂ ಕೊಡುಗೆ ನೀಡಬೇಕು'' ಎಂದು ಖಾದರ್ ತಿಳಿಸಿದರು.
ಇದನ್ನೂ ಓದಿ: ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ: ಸಮಾಜ ಒಡೆಯುವ ಶಕ್ತಿ ನಾಶ ಮಾಡಿ - ಸಿಎಂ ಕರೆ - International democracy Day