ತಿರುವನಂತಪುರ (ಕೇರಳ): ನಿಗದಿಗೂ ಎರಡು ದಿನ ಮೊದಲೇ ಕೇರಳ ಪ್ರವೇಶಿಸಿರುವ ನೈರುತ್ಯ ಮುಂಗಾರು ಅಬ್ಬರ ರಾಜ್ಯದಲ್ಲಿ ಹೆಚ್ಚಿದ್ದು, ಭಾರೀ ಮಳೆಯಿಂದಾಗಿ ಹಲವು ಪ್ರದೇಶದಲ್ಲಿ ಭೂ ಕುಸಿತ, ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ, ಮರ ಬಿದ್ದ ಪ್ರಕರಣಗಳು ವರದಿಯಾಗಿವೆ.
ಕೊಟ್ಟಾಯಂ, ಇಡುಕ್ಕಿ ಮತ್ತು ಎರ್ನಾಕುಲಂನ ಹಲವು ಪ್ರದೇಶದಲ್ಲಿ ಶುಕ್ರವಾರ ಸಂಜೆಯಿಂದ ಭಾರೀ ಮಳೆಯಾಗುತ್ತಿದ್ದು, ಇಡುಕ್ಕಿಯ ಶಿಖರ ಪ್ರದೇಶವಾಗಿರುವ ಪೂಚಪ್ರಾ ಮತ್ತು ಕೊಲಪ್ರಾ ಪ್ರದೇಶಲ್ಲಿ ಭೂಕುಸಿತ ಮತ್ತು ಮರ ಬಿದ್ದಿದೆ. ಭೂ ಕುಸಿತದಿಂದ ಕೆಲವು ಮನೆಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ಆದರೆ, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಣ್ಣು ಕುಸಿತದ ಭೀತಿಯಿಂದಾಗಿ ತೊಡುಪುಳ ಪುಲಿಯನ್ಮಲ ರಾಜ್ಯ ಹೆದ್ದಾರಿ ಸೇರಿದಂತೆ ಕೆಲವು ಸ್ಥಳದಲ್ಲಿ ಸಾರಿಗೆ ನಿರ್ಬಂಧವನ್ನು ವಿಧಿಸಲಾಗಿದೆ. ಇಡುಕ್ಕಿಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತ್ತವಾಗಿದ್ದು, ರಾತ್ರಿ ಸಮಯದಲ್ಲಿ ಸಾರಿಗೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾಜ್ಯದ ಹಲವು ಪ್ರದೇಶದಲ್ಲಿ ವ್ಯಾಪಾಕ ಮಳೆಯಿಂದಾಗಿ ಇಡುಕ್ಕಿಯಲ್ಲಿನ ಮಲಂಕರ ಅಣೆಕಟ್ಟಿನ ನೀರಿನಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆ ತೊಡುಪುಳ ಮುವಟ್ಟುಪುಳ ನದಿ ತೀರದ ಪ್ರದೇಶದ ಜನರಿಗೆ ಮುನ್ನೆಚ್ಚರಿಕೆಯ ಸೂಚನೆ ನೀಡಲಾಗಿದೆ.
ಕೊಟ್ಟಾಯಂನಲ್ಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೀನಚಲ್ ಮತ್ತು ಮನಿಮಲ್ ನದಿಗಳು ಉಕ್ಕಿ ಹರಿಯುತ್ತಿದ್ದು, ಈ ಪ್ರದೇಶದ ಜನರಿಗೆ ಕೂಡ ಸುರಕ್ಷತೆ ವಹಿಸುವಂತೆ ತಿಳಿಸಲಾಗಿದೆ. ಕೊಟ್ಟಾಯಂನ ಹಲವು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶುಕ್ರವಾರ ಸಂಜೆ ತಗ್ಗು ಪ್ರದೇಶಗಳು ಜಲಾವೃತಗೊಂಡು, ಟ್ರಾಫಿಕ್ ಸಮಸ್ಯೆ ಎದುರಿಸುವಂತಾಗಿದೆ.
ಬಂದರು ನಗರಿ ಕೊಚ್ಚಿನಲ್ಲಿ ಸಾಧಾರಣ ಮಳೆಯಾಗಿದ್ದು, ಎರ್ನಾಕುಲಂನಲ್ಲಿ ಭಾರೀ ಸುರಿಯುತ್ತಿದೆ. ಎರ್ನಾಕುಲಂ, ತ್ರಿಸ್ಸೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಗಾಳಿ ವೇಗ ಗಂಟೆಗೆ 40 ಕಿ,ಮೀ ಇದ್ದು, ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಲಿದೆ. ಕೊಲ್ಲಂ ಮತ್ತು ಪತ್ತನಂತಿಟ್ಟು, ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಪ್ರದೇಶದಲ್ಲಿ ಸಾಧರಣಾ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಅನುಸಾರ ಕೇರಳಕ್ಕೆ ಮೇ 30ರಂದು ನೈರುತ್ಯ ಮುಂಗಾರು ಪ್ರವೇಶಿಸಬೇಕಿತ್ತು. ಇದೀಗ ಎರಡು ದಿನ ಮುಂಚೆಯೇ ಮುಂಗಾರು ಮಳೆ ಆರಂಭವಾಗಿದೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಕೂಡ ಸಾಕಷ್ಟು ಹಾನಿ ಉಂಟು ಮಾಡಿತ್ತು. ಭಾರತದ ಕೃಷಿ ಆಧಾರಿತ ಆರ್ಥಿಕತೆ ಮೇಲೆ ನಾಲ್ಕು ತಿಂಗಳ ಅವಧಿಯ ಮುಂಗಾರು ಮಹತ್ವದ ಪಾತ್ರ ವಹಿಸುತ್ತದೆ.
ಇದನ್ನೂ ಓದಿ: ಎರಡು ದಿನ ಮುಂಚಿತವಾಗಿಯೇ ಕೇರಳಕ್ಕೆ ಅಪ್ಪಳಿಸಿದ ಮುಂಗಾರು; ಅನ್ನದಾತರ ಸಂಭ್ರಮ; ಕರ್ನಾಟಕಕ್ಕೆ ಯಾವಾಗ?