ಅಮೇಥಿ(ಉತ್ತರ ಪ್ರದೇಶ): ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಉತ್ತರ ಪ್ರದೇಶದ ಅಮೇಥಿಯಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಫೆಬ್ರವರಿ 22ರಂದು ಗೃಹಪ್ರವೇಶ ಸಮಾರಂಭ ನಡೆಯಲಿದೆ. ವೈದಿಕ ಸ್ತೋತ್ರ ಪಠಣದ ನಡುವೆ ಗೃಹಪ್ರವೇಶ ಜರುಗಲಿದ್ದು, ಬಳಿಕ ಔತಣಕೂಟ ಏರ್ಪಡಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
2019ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ನಾಯಕ ರಾಹುಲ್ ಗಾಂಧಿ ವಿರುದ್ಧ ಗೆದ್ದು ಸ್ಮೃತಿ ಇರಾನಿ ಲೋಕಸಭೆ ಪ್ರವೇಶಿಸಿದ್ದರು. ಬಳಿಕ ಕ್ಷೇತ್ರದ ಜನತೆ ತಮ್ಮನ್ನು ಭೇಟಿಯಾಗಲು ದೆಹಲಿಗೆ ಬರಬೇಕಾಗಿಲ್ಲ, ಅಮೇಥಿಯಲ್ಲಿಯೇ ಮನೆ ನಿರ್ಮಿಸಿ, ಸಮಸ್ಯೆಗಳನ್ನು ಆಲಿಸುವುದಾಗಿ ಮತದಾರರಿಗೆ ಇರಾನಿ ಭರವಸೆ ನೀಡಿದ್ದರು.
ಅಂತೆಯೇ, 2021ರಲ್ಲಿ ಅಮೇಥಿಯ ಗೌರಿಗಂಜ್‌ನಲ್ಲಿರುವ ಮೆದನ್ ಮಾವಾಯಿ ಪ್ರದೇಶದಲ್ಲಿ ಭೂಮಿ ಖರೀದಿಸಿದ್ದರು. ಅದೇ ವರ್ಷ ಭೂಮಿ ಪೂಜೆ ನೆರವೇರಿಸಿದ್ದ ಇರಾನಿ ಮತ್ತು ಅವರ ಪತ್ರ ಜೋರ್ ಇರಾನಿ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇದೀಗ ಮನೆಯ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದೆ.
ಈಗಾಗಲೇ ಅಂತಿಮ ಹಂತದ ಕಾರ್ಯಗಳು ಮತ್ತು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಗೃಹಪ್ರವೇಶ ಸಮಾರಂಭದ ಆಮಂತ್ರಣ ಪತ್ರಿಕೆಗಳನ್ನೂ ಮುದ್ರಿಸಿ ವಿತರಿಸಲಾಗಿದೆ. ಫೆಬ್ರವರಿ 22ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಹೋಮ-ಹವನ ನಡೆಯಲಿದೆ ಎಂದು ಮೂಲಗಳ ಹೇಳಿವೆ. ಸಚಿವರ ಹೊಸ ಮನೆಯ ಗೃಹಪ್ರವೇಶ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ರಾಮಪ್ರಸಾದ್ ಪ್ರತಿಕ್ರಿಯಿಸಿ, ''ಶ್ರೀರಾಮನ ಕೃಪೆಯಿಂದ ಸ್ಮೃತಿ ಇರಾನಿ ಅವರ ನಿವಾಸ ಸಿದ್ಧವಾಗಿದ್ದು, ಫೆ.22ರಂದು ಗೃಹಪ್ರವೇಶ ಸಮಾರಂಭ ಅದ್ದೂರಿ ಜರುಗಲಿದೆ. ಹೊಸ ಮನೆ ನಿರ್ಮಿಸುವ ಮೂಲಕ ಅವರು ಅಮೇಥಿ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ್ದಾರೆ'' ಎಂದರು.
ಮತ್ತೊಂದು ಮೂಲಗಳ ಪ್ರಕಾರ, ಸ್ಮೃತಿ ಇರಾನಿ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಅಮೇಥಿ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಗೃಹ ಪ್ರವೇಶದ ನಂತರ ಅವರು ಇದೇ ಮನೆಯಲ್ಲಿ ವಾಸವಿರಲು ಆರಂಭಿಸಲಿದ್ದಾರೆ. ಇಲ್ಲಿಂದಲೇ ಚುನಾವಣಾ ತಂತ್ರಗಾರಿಕೆಯೂ ನಿರ್ಧಾರವಾಗಲಿದೆ. ಇತ್ತೀಚೆಗೆ, ಅಯೋಧ್ಯೆಯ ರಾಮ ಮಂದಿರದಲ್ಲಿ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರವನ್ನು ಈ ಹೊಸ ಮನೆಯಲ್ಲಿಯೇ ಏರ್ಪಡಿಸಲಾಗಿತ್ತು. ಈ ವೇಳೆ, ಖುದ್ದು ಸ್ಮೃತಿ ಇರಾನಿ ಸಹ ಭಾಗವಹಿಸಿದ್ದರು.
ಇದನ್ನೂ ಓದಿ: ಲೋಕಸಭೆಗೆ ಸ್ಪರ್ಧಿಸದ ಸೋನಿಯಾ: ರಾಯ್‌ಬರೇಲಿ ಮತದಾರರಿಗೆ ಭಾವನಾತ್ಮಕ ಪತ್ರ