ವೈಯನಾಡು: ವಯನಾಡು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಕೇರಳ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಲ್ಲಿಯ ತಲಪ್ಪುಳದ ಕಂಬಮಲ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕೇರಳ ಪೊಲೀಸರ ವಿಶೇಷ ತಂಡ 'ಥಂಡರ್ಬೋಲ್ಟ್' ಈ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಮಾವೋವಾದಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರೂ ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು ಒಂಬತ್ತು ಸುತ್ತು ಗುಂಡಿನ ದಾಳಿ ನಡೆದಿದೆ. ಆದರೇ ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಒಂದು ವಾರದ ಹಿಂದೆ ಶಂಕಿತ ಶಸ್ತ್ರಸಜ್ಜಿತ ಮಾವೋವಾದಿಗಳ ನಾಲ್ಕು ಸದಸ್ಯರ ಗುಂಪು ಕಂಬಮಾಲಾಕ್ಕೆ ತೆರಳಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಅಲ್ಲಿನ ಜನರನ್ನು ಒತ್ತಾಯಿಸಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ಛತ್ತೀಸಗಢದಲ್ಲೂ ನಿನ್ನೆ ದಿನ ಪೊಲೀಸ್ ಮತ್ತು ನಕ್ಸಲರ ಮಧ್ಯೆ ಎನ್‌ಕೌಂಟರ್ ನಡೆದಿದ್ದು ಇದರಲ್ಲಿ9 ನಕ್ಷಲಿಯರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ನಕ್ಸಲ್ ಪೀಡಿತ ಬಸ್ತಾರ್ ವಿಭಾಗದ ನಾರಾಯಣಪುರ ಜಿಲ್ಲೆಯಲ್ಲಿ ಎನ್‌ಕೌಂಟರ್ ನಡೆದಿದೆ. ಮೂವರು ಮಹಿಳೆಯರು ಸೇರಿದಂತೆ ಒಟ್ಟು 9 ನಕ್ಸಲೀಯರ ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಸ್ತಾರ್ ಐಜಿ ಸುಂದರರಾಜ್ ಪಿ ಅವರು ಎನ್‌ಕೌಂಟರ್ ಅನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಭೀಕರ ಗುಂಡಿನ ಕಾಳಗ; 29 ನಕ್ಸಲರ ಹತ್ಯೆಗೈದ ಭದ್ರತಾ ಪಡೆ - Naxal Encounter