ಗ್ವಾಲಿಯರ್ (ಮಧ್ಯಪ್ರದೇಶ): 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ವಿದ್ಯಾರ್ಥಿನಿ ಮಾಡಿದ್ದ ಮೊಬೈಲ್ ಸಂದೇಶಗಳು ಇದೀಗ ಪತ್ತೆಯಾಗಿವೆ. ದೆವ್ವವಾಗಿ ನಾನು ಹೆದರಿಸುತ್ತೇನೆ ಎಂದೆಲ್ಲ ಸಂದೇಶಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಆಕೆ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಗೋಲಾ ಕಾ ಮಂದಿರ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನ ಎಂಟನೇ ಮಹಡಿಯಿಂದ ಶುಕ್ರವಾರ ರಾತ್ರಿ ವಿದ್ಯಾರ್ಥಿನಿ ಜಿಗಿದಿದ್ದಳು. ಕಟ್ಟಡದಿಂದ ಈಕೆ ಬೀಳುವುದನ್ನು ಜನರು ಸಹ ನೋಡಿದ್ದರು. ಆರಂಭದಲ್ಲೇ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದರು. ಆದರೆ, ಪೋಷಕರು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಹಾಗೂ ಯಾರೋ ಕೊಲೆ ಮಾಡಿರಬೇಕು ಎಂದು ಭಾವಿಸಿದ್ದರು. ಬಾಲಕಿಯ ತಲೆಗೆ ಯಾವುದೇ ಪೆಟ್ಟುಗಳು ಆಗದೇ ಇರುವುದು ಸಹ ಅನುಮಾನಕ್ಕೆ ಕಾರಣವಾಗಿತ್ತು.
ಇದೀಗ ವಿದ್ಯಾರ್ಥಿನಿ ಸಾವಿನ ಪ್ರಕರಣದಲ್ಲಿ ಪೊಲೀಸರಿಗೆ ಆಘಾತಕಾರಿ ಸಾಕ್ಷ್ಯ ಸಿಕ್ಕಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಅಲ್ಲದೇ, ಇದು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತುಪಡಿಸುತ್ತಿದೆ. ಕೆಲವು ಮೊಬೈಲ್ ಸಂದೇಶಗಳಲ್ಲಿ ತನ್ನ ಮಾನಸಿಕ ಸಮಸ್ಯೆಗಳನ್ನು ವಿದ್ಯಾರ್ಥಿನಿ ಉಲ್ಲೇಖಿಸಿದ್ದಾಳೆ. ನನಗೆ ಸ್ನೇಹಿತರಿಲ್ಲ. ಜೊತೆಗೆ ಒಬ್ಬ ಸ್ನೇಹಿತನ ಜತೆಗೂ ಜಗಳ ಮಾಡಿದ್ದಳು. ನಾನು ನಿನ್ನನ್ನು ದೆವ್ವ ಎಂದು ಹೆದರಿಸುತ್ತೇನೆ. ಕೊನೆಗೆ ಗುಡ್ ಬೈ ಎಂದು ಸ್ನೇಹಿತನನ್ನು ಉಲ್ಲೇಖಿಸಿ ಬರೆದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತಾಯಿ, ಮಗಳು, ಸಾಕು ನಾಯಿಗೆ ಗುಂಡಿಕ್ಕಿ ರಾಜಕಾರಣಿ ಆತ್ಮಹತ್ಯೆ: ಹಾಲು ತರಲು ಹೋಗಿದ್ದ ಪತ್ನಿ ಬಚಾವ್!
ಆತ್ಮಹತ್ಯೆ ಎಂದಿಗೂ ಪರಿಹಾರವಲ್ಲ: ನೀವು ಆತ್ಮಹತ್ಯೆ ಆಲೋಚನೆಗಳನ್ನು ಹೊಂದಿದ್ದರೆ ಅಥವಾ ನಿಮಗೆ ಒಂಟಿದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ನೀವು ಸ್ನೇಹ ಫೌಂಡೇಶನ್‌ಗೆ ಕರೆ ಮಾಡುವ ಮೂಲಕ ನೆರವು ತೆಗೆದುಕೊಳ್ಳಬಹುದು. ನಿಮ್ಮ ಮಾತನ್ನು ಕೇಳಲು ಯಾರಾದರೂ ಯಾವಾಗಲೂ ಸಿದ್ಧ ಇರುತ್ತಾರೆ. ಸ್ನೇಹ ಫೌಂಡೇಶನ್‌ನ ಸಂಖ್ಯೆ 04424640050ಗೆ (24x7 ಲಭ್ಯ ಇರುತ್ತದೆ) ಕರೆ ಮಾಡಬಹುದು. ಅಥವಾ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿಯಲ್ಲಿ (9152987821) ನಿಮ್ಮ ಸಮಸ್ಯೆಯನ್ನು ನೀವು ವ್ಯಕ್ತಪಡಿಸಬಹುದು. ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10ರವರೆಗೆ ಲಭ್ಯವಿರುತ್ತದೆ.