ಮುಂಬೈ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಗರಿಗೆದರಿದೆ. ಚುನಾವಣೆಗೆ ಮಹಾವಿಕಾಸ್ ಆಘಾಡಿಯಲ್ಲಿ ಮುಂಬೈ ಸೀಟುಗಳ ಹಂಚಿಕೆ ಬಹುತೇಕ ನಿರ್ಧಾರವಾಗಿದೆ. ಶಿವಸೇನೆ ಮುಂಬೈನಲ್ಲಿ ಗರಿಷ್ಠ 20 ಸ್ಥಾನಗಳಲ್ಲಿ ಸ್ಪರ್ಧಿಸಲು ಇತರ ಪಕ್ಷಗಳು ಒಪ್ಪಿಗೆ ನೀಡಿದ್ದು, ಈ ಕುರಿತು ಅಂತಿಮ ಚರ್ಚೆ ಸಾಗಿದೆ ಎಂದು ಶಿವಸೇನಾ ಸಂಸದ ಅನಿಲ್ ದೇಸಾಯಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಮಹಾವಿಕಾಸ ಅಘಾಡಿ ಸೀಟು ಹಂಚಿಕೆಯಲ್ಲಿ ಮುಂದಾಳತ್ವ ವಹಿಸಿ ಪ್ರಚಾರ ಆರಂಭಿಸಿತ್ತು. ಇದು ಮೈತ್ರಿ ಪಾಳಯದಲ್ಲಿ ಲಾಭ ತಂದಿತ್ತು. ಇದೀಗ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾವಿಕಾಸ ಅಘಾಡಿಯಲ್ಲಿ ಸೀಟು ಹಂಚಿಕೆ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಮೊದಲನೆಯದಾಗಿ, ಮುಂಬೈನಲ್ಲಿ 36 ಸ್ಥಾನಗಳ ಚರ್ಚೆ ಬಹುತೇಕ ಅಂತಿಮವಾಗಿದೆ.
ಚರ್ಚೆ ಬಳಿಕ ಮುಂಬೈನಲ್ಲಿ ಗರಿಷ್ಠ ಸ್ಥಾನ ಪಡೆಯುವಲ್ಲಿ ಶಿವಸೇನೆ ಉದ್ದವ್ ಬಣ ಮೇಲುಗೈ ಸಾಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂಬೈ 8 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಹಿನ್ನೆಲೆ ಮೈತ್ರಿಯಲ್ಲಿ ಶಿವಸೇನಾ ಬಲ ಹೆಚ್ಚಿದೆ ಎಂದು ಎಲ್ಲಾ ಮೂರು ಪಕ್ಷಗಳಿಗೆ ಮನವರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷಕ್ಕೆ 20 ಸ್ಥಾನವನ್ನು ಸರ್ವಾನುಮತದಿಂದ ಬಿಟ್ಟುಕೊಟ್ಟಿದ್ದಾರೆ ಎಂದು ಶಿವಸೇನಾ ಸಂಸದ ಅನಿಲ್ ದೇಸಾಯಿ ತಿಳಿಸಿದ್ದಾರೆ.
ಈ ವಿಚಾರ ಇನ್ನೂ ಚರ್ಚೆಯಾಗುತ್ತಿದೆ. ಶಿವಸೇನೆ ಮುಂಬೈನಲ್ಲಿ ತಳಮಟ್ಟದ ಪ್ರಾಬಲ್ಯ ಹೊಂದಿದ್ದು, 20 ಕ್ಷೇತ್ರದಲ್ಲಿ ಪ್ರಬಲವಾಗಿದೆ. ಶಿವಸೇನೆ ವಿಭಜನೆ ಬಳಿಕ ಶಿವಸೇನಾ ಉದ್ಧವ್ ಬಾಳಸಾಹೇಬ್ ಠಾಕ್ರೆ ಪಕ್ಷ ಮುಂಬೈನಲ್ಲಿ ಕೇವಲ ಆರು ಶಾಸಕರನ್ನು ಹೊಂದಿದೆ. ಆದರೆ, ನಗರದಲ್ಲಿ ಪಕ್ಷ ತಳಮಟ್ಟದ ಕಾರ್ಯಕರ್ತರ ಪಡೆ ಹೊಂದಿದೆ ಎಂದು ದೇಸಾಯಿ ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ ಎಂಎನ್ಎಸ್ ಸಂದೀಪ್ ದೇಶಪಾಂಡೆ ಅವರನ್ನು ವರ್ಲಿ ಕ್ಷೇತ್ರದಿಂದ ಕಣಕ್ಕಿಳಿಸಲು ಪ್ರಯತ್ನಿಸುತ್ತಿದೆ. ನಂತರ ಶಿವಡಿ ಕ್ಷೇತ್ರವು ಅಜಯ್ ಚೌಧರಿ ಅವರ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಬಾಳಾ ನಂದಗಾಂವಕರ್ ಸ್ಪರ್ಧಿಸುವ ಸಾಧ್ಯತೆ ಇದೆ. ಹೀಗಾಗಿ ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷವು ಈ ಎರಡು ಕ್ಷೇತ್ರಗಳಿಗೆ ಒತ್ತು ನೀಡಿದೆ. ಶಿವಸೇನಾ ಭವನ ಹೊಂದಿರುವ ದಾದರ್ ಮಹೀಮಾ ಕ್ಷೇತ್ರದಲ್ಲಿ ಸದ ಸರ್ವಂಕರ್ ವಿರುದ್ಧ ವಿಶಾಖ ರಾವುತ್ ಹೆಸರು ಕೇಳಿ ಬರುತ್ತಿದೆ. ಮಾತೋಶ್ರೀ ಬಂಗಲೆ ಇರುವ ಪೂರ್ವ ಬಾಂದ್ರಾ ಕ್ಷೇತ್ರವೂ ಶಿವಸೇನೆ ಯುಬಿಟಿಗೆ ಪ್ರತಿಷ್ಠಿತ ಕಣವಾಗಿದ್ದು ವರುಣ್ ಸರ್ದೇಸಾಯಿ ಹೆಸರು ಮುನ್ನಲೆಗೆ ಬಂದಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸುವಂತೆ ಶಿವಸೇನೆ ಯುಬಿಟಿ ಪಕ್ಷ ನಿರಂತರವಾಗಿ ಒತ್ತಾಯಿಸುತ್ತಲೇ ಬಂದಿದೆ. ಈ ವಿಚಾರದಲ್ಲಿ ಕಾಂಗ್ರೆಸ್ನ ಉಸ್ತುವಾರಿ ರಮೇಶ್ ಚೆನ್ನೈಥಲಾ ಚರ್ಚೆಗೆ ತೆರೆ ಎಳೆದಿದ್ದು, ಸಿಎಂ ಹುದ್ದೆ ಕುರಿತು ಚರ್ಚಿಸಲು ಯಾವುದೇ ಆಸಕ್ತಿ ಹೊಂದಿಲ್ಲ. ಚುನಾವಣೆ ಗೆಲ್ಲುವುದು ಮುಖ್ಯ ಎಂದಿದ್ದಾರೆ. ಎನ್ಸಿಪಿಯ ಶರದ್ ಪವಾರ್ ಕೂಡ ಅಧಿಕಾರಕ್ಕೆ ಬರುವುದು ಮುಖ್ಯ. ಬಳಿಕ ಈ ಕುರಿತು ನಿರ್ಣಯಿಸೋಣ ಎಂದಿದ್ದಾರೆ.
ಮುಂಬೈನಲ್ಲಿ ಸೀಟು ಹಂಚಿಕೆ ಬಹುತೇಕ ಪೂರ್ಣಗೊಂಡಿದೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ. ಮುಂಬೈನ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇನ್ನೂ ಬಲಿಷ್ಠವಾಗಿದೆ. ನಾವು ಈ ಕ್ಷೇತ್ರಗಳಲ್ಲಿ ಪ್ರಾಬಲ್ಯವನ್ನು ಮುಂದುವರಿಸುತ್ತೇವೆ. ಆದ್ದರಿಂದ ಮುಂಬೈನಲ್ಲಿ ಕಾಂಗ್ರೆಸ್‌ಗೆ ಗೌರವಾನ್ವಿತ ಸ್ಥಾನಗಳು ಸಿಗುವಂತೆ ನಾವು ಪ್ರಯತ್ನಿಸುತ್ತಿದ್ದೇವೆ. ಮಹಾವಿಕಾಸ್ ಅಘಾಡಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಟ ಇಲ್ಲ. ಚುನಾವಣೆ ನಂತರ ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಹಾಗಾಗಿ ಈಗಲೇ ಚರ್ಚೆ ಮಾಡುವುದು ಸೂಕ್ತವಲ್ಲ ಎಂದು ಸಾವಂತ್ ಸ್ಪಷ್ಟಪಡಿಸಿದ್ದಾರೆ.
ಮುಂಬೈ, ಪೂರ್ವ ಉಪನಗರಗಳು ಮತ್ತು ಪಶ್ಚಿಮ ಉಪನಗರಗಳಲ್ಲಿನ ಒಟ್ಟು 36 ವಿಧಾನಸಭಾ ಸ್ಥಾನಗಳಲ್ಲಿ 20 ಸ್ಥಾನಗಳು ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷಕ್ಕೆ, 10 ಕಾಂಗ್ರೆಸ್‌ಗೆ ಮತ್ತು 6 ಎನ್‌ಸಿಪಿ ಶರದ್ ಚಂದ್ರ ಪವಾರ್ ಪಕ್ಷಕ್ಕೆ ಬರಲಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಫಡ್ನವೀಸ್ರಿಗೆ ಶಿವಾಜಿ ಮಹಾರಾಜರ ಇತಿಹಾಸ ಗೊತ್ತಿಲ್ಲ: ಬೇಕಾದರೆ ಗೈಡ್ ಒಬ್ಬರನ್ನು ಕಳುಹಿಸುವೆ, ರಾವತ್ ವ್ಯಂಗ್ಯ