ನವದೆಹಲಿ: ದೇಶಾದ್ಯಂತ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಗೆ ಬೆದರಿ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಅಲ್ಲಿಂದ ಪಲಾಯನ ಮಾಡಿರುವ ಶೇಖ್ ಹಸೀನಾ ಅವರು ಭಾರತದ ರಾಜಧಾನಿ ದೆಹಲಿಗೆ ಇಂದು (ಸೋಮವಾರ) ವಿಮಾನದಲ್ಲಿ ಬಂದಿಳಿದಿದ್ದಾರೆ. ನವದೆಹಲಿ ಬಳಿಯ ಗಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಲ್ಲಿ ಅವರ ವಿಮಾನ ಲ್ಯಾಂಡ್ ಆಯಿತು.
ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹೋರಾಟದಿಂದಾಗಿ 200ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ದೇಶವೇ ಹೊತ್ತಿ ಉರಿಯುತ್ತಿದೆ. ಶೇಖ್ ಹಸೀನಾ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಡ ಹೇರಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಇದನ್ನು ಮನಗಂಡ ಹಸೀನಾ ಅಲ್ಲಿಂದ ಖಾಸಗಿ ವಿಮಾನದಲ್ಲಿ ಮೂಲಕ ತನ್ನ ಸಹೋದರಿಯೊಂದಿಗೆ ಭಾರತಕ್ಕೆ ಬಂದಿದ್ದಾರೆ. ಇಲ್ಲಿಂದ ಅವರು ಇಂಗ್ಲೆಂಡ್ಗೆ ತೆರಳಲಿದ್ದಾರೆ.
ಶೇಖ್ ಹಸೀನಾ ಅವರಿದ್ದ ವಿಮಾನ ಭಾರತದ ವಾಯುಗಡಿ ಪ್ರವೇಶಿಸುತ್ತಿದ್ದಂತೆ, ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಅದನ್ನು ಹಿಂಬಾಲಿಸಿವೆ. ಉತ್ತರಪ್ರದೇಶ ಮತ್ತು ದೆಹಲಿಯ ಮಧ್ಯದ ಗಾಜಿಯಾಬಾದ್‌ನ ಏರ್‌ಬೇಸ್‌ನಲ್ಲಿ ವಿಮಾನ ಇಳಿಯಲು ಅನುವು ಮಾಡಿಕೊಡಲಾಯಿತು. ಬಳಿಕ ಭಾರತದ ಯುದ್ಧ ವಿಮಾನಗಳು ವಾಪಸ್ ತೆರಳಿವೆ.
ಪ್ರಧಾನಿ ಮೋದಿ, ರಾಹುಲ್ಗೆ ಮಾಹಿತಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪ್ರಧಾನಿ ಮೋದಿ ಮತ್ತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಶೇಖ್ ಹಸೀನಾ ಅವರು ಭಾರತಕ್ಕೆ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾರತದಿಂದ ಲಂಡನ್‌ಗೆ ಪ್ರಯಾಣ: ದೇಶದ ನಾಗರಿಕರು ಬಂಡೆದ್ದ ಕಾರಣ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದಾಳಿ ಭೀತಿಯಿಂದ ಪಲಾಯನ ಆಗಿರುವ ಶೇಖ್ ಹಸೀನಾ ಅವರು ಮೊದಲು ತ್ರಿಪುರಾಕ್ಕೆ ಬಂದಿದ್ದರು. ಅಲ್ಲಿಂದ ಗಾಜಿಯಾಬಾದ್ಗೆ ಬಂದಿಳಿದ್ದಾರೆ. ಇಲ್ಲಿಂದ ಅವರು ಬ್ರಿಟನ್ನ ಲಂಡನ್ ನಗರಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಢಾಕಾಗೆ ವಿಮಾನ ಸಂಚಾರ ಬಂದ್: ಗಲಭೆ ಹಿನ್ನೆಲೆಯಲ್ಲಿ ಢಾಕಾಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ಏರ್ ಇಂಡಿಯಾ, ಇಂಡಿಗೋ ವಿಮಾನಗಳ ರದ್ದು ಮಾಡಲಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಮಾನಯಾನ ಸಂಸ್ಥೆ, ಬಾಂಗ್ಲಾದೇಶದ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ವಿಮಾನಗಳ ಸಂಚಾರವನ್ನು ತಕ್ಷಣದಿಂದಲೇ ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಭದ್ರತೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ, 011-69329333 / 011-6932999 ಗೆ ಕರೆ ಮಾಡಿ ಸಂಪರ್ಕಿಸಿ ಎಂದು ತಿಳಿಸಿದೆ.
ರೈಲು ಸೇವೆಗೆ ತಡೆ: ಕೋಲ್ಕತ್ತಾ ಮತ್ತು ಬಾಂಗ್ಲಾದ ರಾಜಧಾನಿ ಢಾಕಾ ಮಧ್ಯೆ ಸಂಚರಿಸುವ ಮೈತ್ರಿ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆಗಸ್ಟ್ 6ರವರೆಗೂ ತಡೆಹಿಡಿಯಲಾಗಿದೆ. ಜುಲೈ 16 ರಿಂದ ರೈಲು ಸಂಚಾರ ಬಂದ್ ಆಗಿದ್ದು, ಇದನ್ನು ನಾಳೆಗೆ ವಿಸ್ತರಿಸಲಾಗಿದೆ.