ವಾರಾಣಸಿ (ಉತ್ತರಪ್ರದೇಶ) : ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿರುವ ಮೂಲ ಕಾಶಿ ವಿಶ್ವನಾಥನಿಗೆ (ಶಿವಲಿಂಗ) ಸೋಮವಾರ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕುವುದಾಗಿ ಘೋಷಿಸಿದ್ದ ವಾರಾಣಸಿಯ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯ ಸ್ವಾಮಿಗಳನ್ನು ಪೊಲೀಸರು ತಡೆದಿದ್ದಾರೆ. ಮಠದಿಂದ ಹೊರಬರದಂತೆ ತಡೆವೊಡ್ಡಿದ್ದಾರೆ.
ಇದು ಪೊಲೀಸರು ಮತ್ತು ಮಠದ ಭಕ್ತರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಶ್ರೀಗಳನ್ನು ಮಠದಿಂದ ಹೊರಬರದಂತೆ ತಡೆದಿದ್ದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಶಿವಲಿಂಗ ಇರುವ ಪ್ರದೇಶದಲ್ಲಿ ನಿರ್ಬಂಧ (144 ಸೆಕ್ಷನ್) ವಿಧಿಸಿರುವ ಕಾರಣ, ಅಲ್ಲಿಗೆ ಹೋಗಲು ಅವಕಾಶ ನೀಡಲಾಗುವುದಿಲ್ಲ. ನಿರ್ಧಾರವನ್ನು ಹಿಂಪಡೆಯುವಂತೆ ಪೊಲೀಸರು ಶ್ರೀಗಳಲ್ಲಿ ಕೋರಿದ್ದಾರೆ.
ಹೊಸ ಸಂಪ್ರದಾಯ ಬೇಡ: ಅವಿಮುಕ್ತೇಶ್ವರಾನಂದ ಶಂಕರಾಚಾರ್ಯ ಸ್ವಾಮಿಗಳು ಇಂದು ಜ್ಞಾನವಾಪಿ ಪ್ರದೇಶದಲ್ಲಿರುವ ಶಿವಲಿಂಗಕ್ಕೆ ಇಂದು ಮಧ್ಯಾಹ್ನ 3 ಗಂಟೆಗೆ ಪೂಜೆ ಸಲ್ಲಿಸುವುದಾಗಿ ಘೋಷಿಸಿದ್ದರು. ಇದರಿಂದ ಅಲರ್ಟ್ ಆಗಿದ್ದ ಪೊಲೀಸರು ಯಾವುದೇ ಅಚಾತುರ್ಯಗಳು ನಡೆಯದಂತೆ ಎಚ್ಚರ ವಹಿಸಿದ್ದರು. ಜ್ಞಾನವಾಪಿ ಸ್ಥಳ ವಿವಾದದ ಬಗ್ಗೆ ಕೋರ್ಟ್ ವಿಚಾರಣೆ ನಡೆಸುತ್ತಿರುವ ನಡುವೆ ಪೂಜೆ ನಡೆಸುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದರು.
ವಿವಾದದ ಬಗ್ಗೆ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಪೂಜೆ ಸಲ್ಲಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬೇಡಿ. ಇದು ಮುಂದೆ ಸಮಸ್ಯೆಗೆ ಕಾರಣವಾಗಲಿದೆ. ಜೊತೆಗೆ ಆ ಸ್ಥಳದಲ್ಲಿ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಪೂಜೆ ಮಾಡುವ ನಿರ್ಣಯವನ್ನು ವಾಪಸ್ ಪಡೆಯುವಂತೆ ಶ್ರೀಗಳಲ್ಲಿ ಪೊಲೀಸರು ಅರಿಕೆ ಮಾಡಿದರು. ಆದಾಗ್ಯೂ ಶ್ರೀಗಳು ಇದು ಹೊಸ ಸಂಪ್ರದಾಯವಲ್ಲ. ಅಲ್ಲಿನ ಶಿವಲಿಂಗ ಮೂಲ ಕಾಶಿ ವಿಶ್ವನಾಥ. ಪೂಜೆ ಸಲ್ಲಿಸುವುದು ಧರ್ಮ, ಸಂಪ್ರದಾಯವಾಗಿದೆ. ಹೀಗಾಗಿ ನಾವು ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಹೇಳಿದರು.
ಧರ್ಮ ಕಾರ್ಯಕ್ಕೆ ಯಾರಿಂದಲೂ ಅನುಮತಿ ಪಡೆಯುವ ಅಗತ್ಯವಿಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಕಾರ್ಯವಾಗಿದೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದರು. ಆದಾಗ್ಯೂ ಪೊಲೀಸರು ಮಠದಿಂದ ಅವರು ಹೊರಬರದಂತೆ ತಡೆದರು. ಆಗ ಭಕ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಪೂಜೆ ಮಾಡುವುದು ಧರ್ಮ: ಪಟ್ಟು ಬಿಡದ ಸ್ವಾಮಿಗಳು ಮಠದಿಂದ ಹೊರಬರಲು ಪ್ರಯತ್ನಿಸಿದರು. ಜ್ಞಾನವಾಪಿಯಲ್ಲಿ ದೊರೆತಿರುವ ಶಿವಲಿಂಗದ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆ ನಡೆಯುತ್ತಿಲ್ಲ. ನಮ್ಮ ಪ್ರಭು (ಕಾಶಿ ವಿಶ್ವನಾಥ) ಇಷ್ಟು ದಿನ ಹಸಿದಿದ್ದಾನೆ. ಧರ್ಮದ ಪ್ರಕಾರ ಆ ಸ್ಥಳವನ್ನು ಶುದ್ಧ ಮಾಡಿ, ಪೂಜೆ ಸಲ್ಲಿಸಬೇಕಿದೆ. ಅದಕ್ಕೆ ಅನುಮತಿ ಏಕೆ ಬೇಕು. ಹಾಗೊಂದು ವೇಳೆ ಅನುಮತಿ ಬೇಕಾದಲ್ಲಿ ಲಿಖಿತವಾಗಿ ಅರ್ಜಿ ಸಲ್ಲಿಸುತ್ತೇವೆ. ಪೊಲೀಸರು ಅಲ್ಲಿಗೆ ಹೋಗಲು ಅವಕಾಶ ನೀಡಬೇಕು. ಸೆಕ್ಷನ್ 144 ಇದ್ದಲ್ಲಿ ಇಬ್ಬರಿಗೆ ಅವಕಾಶ ನೀಡಿ. ಪೂಜೆ ಸಲ್ಲಿಸುತ್ತೇವೆ ಎಂದು ಶಂಕರಾಚಾರ್ಯರು ಹೇಳಿದರು.
ಎಸಿಪಿ ಅತುಲ್ ಅಂಜನ್ ತ್ರಿಪಾಠಿ ಮಾತನಾಡಿ, ಯಾವುದೇ ಹೊಸ ಸಂಪ್ರದಾಯಕ್ಕೆ ಅವಕಾಶವಿಲ್ಲ. ಏಕೆಂದರೆ ವಾರಾಣಸಿ ನ್ಯಾಯಾಲಯ ಸ್ಥಳವನ್ನು ಸೀಲ್ ಮಾಡಲು ಸೂಚಿಸಿದೆ. ಯಾರಿಗೂ ಅಲ್ಲಿಗೆ ಪ್ರವೇಶವಿಲ್ಲ. ಅದರ ಸುತ್ತಲೂ ಹೋಗಲು ಬಿಡುವುದಿಲ್ಲ. ಹೀಗಾಗಿ ಯಾವುದೇ ಕೆಲಸ ಮಾಡಬೇಕಾದರೆ ಅದಕ್ಕೆ ಅನುಮತಿ ಪಡೆಯಬೇಕು. ಸದ್ಯಕ್ಕೆ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಶ್ರೀಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ: ಶಿವಲಿಂಗ ಪ್ರದೇಶ ಸರ್ವೇಗೆ ಹಿಂದುಗಳಿಂದ ಸುಪ್ರೀಂಕೋರ್ಟ್ಗೆ ಅರ್ಜಿ