ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನಡುವೆ 'ಶಕ್ತಿ' ಸಂಘರ್ಷ ಏರ್ಪಟ್ಟಿದೆ. ಪ್ರಧಾನಿ ಶಕ್ತಿಯ ಗುಲಾಮ. ಅದನ್ನು ನಾವು ತೊಡೆದು ಹಾಕುತ್ತೇವೆ ಎಂದು ಟೀಕಿಸಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಪ್ರತಿದಾಳಿ ಮಾಡಿದ್ದ ಪ್ರಧಾನಿ ಮೋದಿ, ನಾವು ಶಕ್ತಿಯ ಆರಾಧಕರು. ಕೆಲವರು ಅದೇ ಶಕ್ತಿಯನ್ನು ನಾಶ ಮಾಡಲು ಮುಂದಾಗಿದ್ದಾರೆ ಎಂದಿದ್ದರು. ಆದರೆ, ತಮ್ಮ ಹೇಳಿಕೆಯನ್ನು ಪ್ರಧಾನಿ ಮೋದಿ ತಿರುಚಿದ್ದಾರೆ. ತಾವು ಹೇಳಿದ ಶಕ್ತಿಯೇ ಬೇರೆ. ಮೋದಿ ಬಿಂಬಿಸಿದ ಶಕ್ತಿಯೇ ಎಂದು ತಿರುಗೇಟು ನೀಡಿದ್ದಾರೆ.
ಸೋಮವಾರ ಈ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಹಣದುಬ್ಬರವನ್ನು ತಡೆಯಲಾಗದೇ, ಜಿಎಸ್‌ಟಿ ಹೇರುವ ಶಕ್ತಿಯ ದಾಸ ಪ್ರಧಾನಿ ಮೋದಿ ಎಂದು ಟೀಕಿಸಿದ್ದಾರೆ. ನನ್ನ ಹೇಳಿಕೆಗಳನ್ನು ಮೋದಿ ಅವರು ತಿರುಚಿದ್ದಾರೆ. ಅವರಿಗೆ ನಾನು ಹೇಳಿದ್ದು, ಇಷ್ಟವಾಗಲ್ಲ. ಸತ್ಯವನ್ನೇ ಮಾತನಾಡಿದಾಗ ಅವರು ಅದರಿಂದ ನುಣುಚಿಕೊಳ್ಳುತ್ತಾರೆ. ನಾನು ಹೇಳಿದ ಶಕ್ತಿ, ನಾವು ಹೋರಾಡುತ್ತಿರುವ ಶಕ್ತಿ ಮೋದಿ ಅವರ ಮುಖವಾಡದ ವಿರುದ್ಧ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡು ಟೀಕಿಸಿದ್ದಾರೆ.
ತನಿಖಾ ಸಂಸ್ಥೆಗಳಾದ ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ, ಮಾಧ್ಯಮ, ವ್ಯಾಪಾರ ಉದ್ಯಮ ಮತ್ತು ಭಾರತದ ಸಂಪೂರ್ಣ ಸಾಂವಿಧಾನಿಕ ರಚನೆಯನ್ನೇ ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ಮೋದಿ ವಿರುದ್ಧ ರಾಹುಲ್ 'ಶಕ್ತಿ' ದಾಳಿ: ಪ್ರಧಾನಿ ಮೋದಿ ವಿರುದ್ಧ ಮತ್ತೆ ಶಕ್ತಿಯ ದಾಳಿ ಮಾಡಿರುವ ರಾಹುಲ್ ಗಾಂಧಿ, ದೇಶದ ಪ್ರಧಾನಿಗಳು ಸಿರಿವಂತ ಉದ್ಯಮಿಗಳ ಸಾಲವನ್ನು ಮನ್ನಾ ಮಾಡುವ ಶಕ್ತಿ ಹೊಂದಿದ್ದಾರೆ. ಆದರೆ, ಬಡರೈತರ ಬಗ್ಗೆ ಕಾಳಜಿ ಹೊಂದಿಲ್ಲ. ಅದೇ ಶಕ್ತಿಯನ್ನು ದೇಶದ ಬಂದರುಗಳು, ವಿಮಾನ ನಿಲ್ದಾಣಗಳು, ಅಗ್ನಿವೀರರ ಆಯ್ಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದು ಅವರ ಧೈರ್ಯವನ್ನು ಹುದುಗಿಸಿಬಿಡುತ್ತದೆ. ದೇಶದ ಮಾಧ್ಯಮಗಳು ಸತ್ಯವನ್ನು ದಮನ ಮಾಡುತ್ತಿವೆ. ಮೋದಿ ಅವರು ಈ ಎಲ್ಲ ಶಕ್ತಿಯ ದಾಸರಾಗಿದ್ದಾರೆ ಎಂದು ಆಪಾದಿಸಿದ್ದಾರೆ.
ಹಣದುಬ್ಬರವನ್ನು ನಿಯಂತ್ರಿಸಲಾಗದೆ ದೇಶದ ಬಡವರ ಮೇಲೆ ಜಿಎಸ್‌ಟಿ ಹೇರುತ್ತಾರೆ. ಆ ಶಕ್ತಿಯನ್ನು ಹೆಚ್ಚಿಸಲು ದೇಶದ ಆಸ್ತಿಯನ್ನು ಹರಾಜು ಹಾಕುತ್ತಾರೆ. ನಾನು ಹೇಳುತ್ತಿರುವ ಶಕ್ತಿ ಯಾವುದೋ ಧಾರ್ಮಿಕ ಶಕ್ತಿಯಲ್ಲ. ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳಿನ ಶಕ್ತಿ. ಇದರ ವಿರುದ್ಧ ಧ್ವನಿ ಎತ್ತಿದಾಗಲೆಲ್ಲಾ ಮೋದಿ ಮತ್ತು ಅವರ ಸುಳ್ಳಿನ ಯಂತ್ರವು ವಿಪರೀತ ಕ್ರಿಯಾಶೀಲವಾಗುತ್ತದೆ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಸುಳ್ಳುಗಳೇ ಕಾಂಗ್ರೆಸ್ ಪಕ್ಷದ ಬಂಡವಾಳ; ಪ್ರಧಾನಿ ಮೋದಿ ಟೀಕಾಪ್ರಹಾರ, ಈಶ್ವರಪ್ಪ ಗೈರು