ಬೆಂಗಳೂರು: ಉತ್ತರ ಪ್ರದೇಶದ ವಾರಾಣಸಿಯ ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆಯ ವೇಳೆ ದೊರೆತ ಕನ್ನಡ ಶಾಸನವೊಂದು ಇತಿಹಾಸಕಾರರ ಗಮನ ಸೆಳೆದಿದೆ. ಮಧ್ಯಕಾಲೀನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಈ ಶಾಸನವನ್ನು ಅಧ್ಯಯನ ಮಾಡಲು ಇತಿಹಾಸಕಾರರ ತಂಡವನ್ನು ಅಲ್ಲಿಗೆ ಕಳುಹಿಸಬೇಕು ಎಂಬ ಕೂಗು ಕೇಳಿಬಂದಿದೆ.
ಎಎಸ್‌ಐ ಸಮೀಕ್ಷಾ ವರದಿಯಲ್ಲಿ ಕನ್ನಡ ಶಾಸನ ಇರುವ ಬಗ್ಗೆ ಬಹಿರಂಗವಾಗಿದೆ. ವಾರಾಣಸಿವರೆಗೂ ಕನ್ನಡದ ಕಂಪು ಪಸರಿಸಿದ ಬಗ್ಗೆ ಐತಿಹಾಸಿಕ ದಾಖಲೆಗಳನ್ನು ಪತ್ತೆಹಚ್ಚಲು ಅಧ್ಯಯನ ತಂಡವನ್ನು ಕಳುಹಿಸಲು ಇತಿಹಾಸಕಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಾರಾಣಸಿಯಲ್ಲಿ ಸಿಕ್ಕಿರುವ ಶಾಸನ ಮತ್ತು ಕರ್ನಾಟಕದಲ್ಲಿ ಇಂತಹ ನೂರಾರು ಶಾಸನಗಳಿಗೆ ಸಾಮ್ಯತೆ ಇದೆ. ಅಕ್ಷರಗಳ ಆಕಾರ ಮತ್ತು ರೂಪದಲ್ಲಿ ಹತ್ತಿರದ ಸಂಬಂಧವಿದೆ. ಕಲ್ಲಿನಲ್ಲಿ ಅಕ್ಷರಗಳನ್ನು ನಿಖರವಾಗಿ ಕೆತ್ತಿರುವುದರಿಂದ ಆತ ಶಿಲ್ಪಿ ಲಿಪಿಕಾರ ಮತ್ತು ವಿದ್ವಾಂಸನಾಗಿದ್ದಿರಬಹುದು. ಶಾಸನದಲ್ಲಿರುವ ಹೆಸರುಗಳನ್ನು ಗಮನಿಸಿದರೆ ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿರಬಹುದು ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.
ವಾರಾಣಸಿ- ಕರ್ನಾಟಕ ಬೆಸೆಯುವ ಕೊಂಡಿ: ದಕ್ಷಿಣ ಕರ್ನಾಟಕದ ಇತಿಹಾಸದ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿದ ಖ್ಯಾತ ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಅವರು ಹೇಳುವಂತೆ, ವಾರಾಣಾಸಿಯಲ್ಲಿ ನೂರಾರು ಕನ್ನಡ ಶಾಸನಗಳಿವೆ. ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದ ಹಲವಾರು ಕನ್ನಡದ ರಾಜರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೂ ದಾನ ನೀಡಿದ್ದಾರೆ. ಅದರ ಉಲ್ಲೇಖಗಳೂ ಇವೆ. ಇಂತಹ ಅನೇಕ ಶಾಸನಗಳಲ್ಲಿ ಕೆಲವನ್ನು ಉತ್ಖನನ ಮಾಡಿ ಸಂರಕ್ಷಿಸಲಾಗಿದೆ. ಕರ್ನಾಟಕ ಮತ್ತು ವಾರಾಣಸಿ ನಡುವಿನ ಐತಿಹಾಸಿಕ ಕೊಂಡಿಯನ್ನು ಬೆಸೆಯುವ ಹಲವು ಶಾಸನಗಳು ನಾಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಈಗ ಸಿಕ್ಕಿರುವ ಶಾಸನವು ಕರ್ನಾಟಕದ ಕೊಡುಗೆಯನ್ನು ಉಲ್ಲೇಖಿಸಿದೆ. ಶಾಸನದಲ್ಲಿ ಹೆಸರಿಸಲಾದ ಜನರ ಹಿನ್ನೆಲೆಯನ್ನು ಕಂಡುಹಿಡಿಯಲು ಸಾಕಷ್ಟು ಸಂಶೋಧನೆಯ ಅಗತ್ಯವಿದೆ. ಅವರು ರಾಜ ಮನೆತನದವರೇ ಅಥವಾ ಶ್ರೀಮಂತ ವ್ಯಾಪಾರಿಗಳೇ ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಈ ರಹಸ್ಯಗಳನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರ ವಾರಣಾಸಿಗೆ ಇತಿಹಾಸಕಾರರು ಮತ್ತು ಶಿಲಾಶಾಸನಗಳ ಅಧ್ಯಯನ ತಂಡವನ್ನು ಕಳುಹಿಸಬೇಕು ಎಂದು ಕೆಲ ಇತಿಹಾಸಕಾರರು ಹೇಳಿದ್ದಾರೆ.
ಕನ್ನಡ ಶಾಸನದಲ್ಲಿ ಏನಿದೆ?: ಎಎಸ್‌ಐ ಪತ್ತೆ ಮಾಡಿದ ಶಾಸನದಲ್ಲಿ ದೊಡ್ಡರಸಯ್ಯನ ಸರಸಂಣನಭಿಂನಹ (ದೊಡ್ಡರಸಯ್ಯನ ನರಸಿಂಹನ ಭಿನ್ನಹ) ಎಂದು ಬರೆಯಲಾಗಿದೆ. ಇದು ಕೋಲಾರ- ಚಿಕ್ಕಬಳ್ಳಾಪುರದ ಬಳಸುವ ಭಾಷೆಯಾಗಿದ್ದು, ಶಾಸನವು 16 ನೇ ಶತಮಾನದ ಪ್ರಾಚೀನ ಕಾಲದ ಹೆಗ್ಗುರುತಾಗಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.
ಇದನ್ನೂ ಓದಿ: ಗೋವಾದಲ್ಲಿ ಪ್ರಾಚೀನ ಕನ್ನಡ ಶಾಸನ ಪತ್ತೆ