ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ದಾಳಿ - ಪ್ರತಿದಾಳಿ ನಡೆದಿದ್ದು, ದಾಳಿಯಲ್ಲಿ ಭಾರತದ ಭದ್ರತಾ ಪಡೆಗಳು ಶಂಕಿತ ಪಾಕಿಸ್ತಾನಿ ಭಯೋತ್ಪಾದಕನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಸಮೀಪದ ಹಳ್ಳಿಯೊಂದರ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕರು, ಓರ್ವ ನಾಗರಿಕನನ್ನು ಗಾಯಗೊಳಿಸಿದ್ದರು. ಇದರ ಬೆನ್ನಲ್ಲೇ ಭದ್ರತಾ ಪಡೆ ಉಗ್ರರನ್ನು ಹೊಡೆದುರುಳಿಸಲು ಬೃಹತ್ ಕಾರ್ಯಾಚರಣೆ ಕೈಗೊಂಡಿದೆ. ಇದೇ ವೇಳೆ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಳಿಯಲ್ಲಿ ಒಬ್ಬ ಶಂಕಿತ ಉಗ್ರನನ್ನು ಭದ್ರತಾ ಪಡೆಗಳು ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೋಡಾ ಜಿಲ್ಲೆಯ ಚಟರ್ಗಲಾ ಪ್ರದೇಶದಲ್ಲಿ 4 ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರ ಜಂಟಿ ಚೆಕ್ಪೋಸ್ಟ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ಕೂಡ ಪ್ರತಿದಾಳಿ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ಮುಂದುವರೆದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಕಥುವಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್, "ಗಡಿ ಒಳಗೆ ನುಸುಳಿದ್ದು ಇಬ್ಬರು ಭಯೋತ್ಪಾದಕರು ಮಂಗಳವಾರ ರಾತ್ರಿ 8ರ ಸುಮಾರಿಗೆ ಸೈದಾ ಸುಖಲ್ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರಾಮಸ್ಥರಿಂದ ನೀರು ಕೇಳಿದ್ದು, ಮನೆಯವರು ಭಯ ಭೀತರಾಗಿದ್ದಾರೆ. ಅವರು ತಕ್ಷಣ ನಮಗೆ ಮಾಹಿತಿ ನೀಡಿದ್ದು, ಉಪವಿಭಾಗೀಯ ಪೊಲೀಸ್ ಅಧಿಕಾರಿ ಮತ್ತು ಠಾಣಾಧಿಕಾರಿ ನೇತೃತ್ವದ ಪೊಲೀಸ್ ತಂಡ ಗ್ರಾಮಕ್ಕೆ ಧಾವಿಸಿತು. ಭಯೋತ್ಪಾದಕರಲ್ಲಿ ಒಬ್ಬ ಗ್ರೇನೇಡ್ ಎಸೆಯಲು ಯತ್ನಿಸಿದ್ದಾನೆ. ಅದೇ ವೇಳೆ, ಗುಂಡಿನ ದಾಳಿ ನಡೆಸಿದ ನಮ್ಮ ಭದ್ರತಾ ಪಡೆಯವರು ಉಗ್ರನನ್ನು ಕೊಂದು ಹಾಕಿದ್ದಾರೆ. ಇನ್ನೊಬ್ಬ ಭಯೋತ್ಪಾದಕ ಗ್ರಾಮದಲ್ಲಿ ಅಡಗಿಕೊಂಡಿರುವ ಬಗ್ಗೆ ವರದಿಯಾಗಿದೆ" ಎಂದು ತಿಳಿಸಿದರು.
"ಹೀರಾನಗರ ವಲಯದ ಕೂಟ ಮೋಡ್ ಬಳಿಯ ಗ್ರಾಮದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಹತ್ಯೆಗೀಡಾದ ಉಗ್ರನ ಬಳಿಯಿಂದ ಎಕೆ ಅಸಾಲ್ಟ್ ರೈಫಲ್ ಮತ್ತು ರಕ್ಸಾಕ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಆತನ ಗುರುತು ಹಾಗೂ ಯಾವ ಗುಂಪಿಗೆ ಸೇರಿದವನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಭಯೋತ್ಪಾದಕರ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ನಾಗರಿಕ ಓಂಕಾರ್ ನಾಥ್ ಅಲಿಯಾಸ್ ಬಿಟು ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಹೇಳಿದರು.
ಉಗ್ರರ ದಾಳಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಹಾಗೂ ಅನೇಕರು ಗಾಯಗೊಂಡಿದ್ದಾರೆ ಎನ್ನುವ ವದಂತಿಯನ್ನು ತಳ್ಳಿ ಹಾಕಿರುವ ಆನಂದ್ ಜೈನ್, ಭಯೋತ್ಪಾದಕ ದಾಳಿಯಲ್ಲಿ ಒಬ್ಬ ನಾಗರಿಕ ಮಾತ್ರ ಗಾಯಗೊಂಡಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿ: ಜಮ್ಮುವಿನ ರಿಯಾಸಿಯಲ್ಲಿ ಭದ್ರತಾ ಪಡೆಗಳಿಂದ ಮುಂದುವರಿದ ತೀವ್ರ ಶೋಧ - TERROR ATTACK