ಚಂಡೀಗಢ (ಪಂಜಾಬ್): ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನು ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ದೆಹಲಿ ಚಲೋ ಹೋರಾಟ ಮುಂದುವರಿದಿದೆ. ಆದರೆ, ರಾಷ್ಟ್ರ ರಾಜಧಾನಿಗೆ ಪ್ರವೇಶಿಸದಂತೆ ಗಡಿಯಲ್ಲೇ ರೈತರನ್ನು ತಡೆಹಿಡಿಯಲಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ರೈತ ಮುಖಂಡರೊಂದಿಗೆ ಸಂಧಾನ ಸಭೆಗಳನ್ನು ನಡೆಸುತ್ತಿದೆ. ಮತ್ತೊಂದೆಡೆ, ಫೆಬ್ರವರಿ 24ರ ವರೆಗೆ ಪಂಜಾಬ್‌ನ ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.
ರೈತರ ಆಂದೋಲನದಿಂದಾಗಿ ಪಂಜಾಬ್‌ನ ಏಳು ಜಿಲ್ಲೆಗಳ 20 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ಪಟಿಯಾಲ, ಸಂಗ್ರೂರ್, ಶ್ರೀಫತೇಘರ್ ಸಾಹಿಬ್, ಬಟಿಂಡಾ, ಮಾನ್ಸಾ, ಮೊಹಾಲಿ ಮತ್ತು ಶ್ರೀಮುಕ್ತಸರ ಸಾಹಿಬ್ ಜಿಲ್ಲೆಯಲ್ಲಿ ಫೆಬ್ರುವರಿ 24ರ ವರೆಗೆ ಇಂಟರ್‌ನೆಟ್ ಬಂದ್ ಮಾಡಲಾಗಿದೆ.
ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 20 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂಟರ್‌ನೆಟ್ ಸೇವೆ ರದ್ದು ಮಾಡಲಾಗಿದೆ. ಹರಿಯಾಣ ಮತ್ತು ಪಂಜಾಬ್ ಗಡಿಯಲ್ಲಿ ರೈತರು ಧರಣಿ ಕುಳಿತಿರುವ ಏಳು ಜಿಲ್ಲೆಗಳ ಬ್ಲಾಕ್‌ಗಳಲ್ಲಿ ಈ ನಿಷೇಧ ಹೇರಲಾಗಿದೆ. ಇದಕ್ಕೂ ಮುನ್ನ 7 ದಿನಗಳ ಕಾಲ ಇದೇ ಪ್ರದೇಶದಲ್ಲಿ ನಿಷೇಧಾಜ್ಞೆ ಸಹ ಜಾರಿಗೊಳಿಸಲಾಗಿದೆ.
ಈ ಹಿಂದೆ ಪದೇ ಪದೇ ಇಂಟರ್‌ನೆಟ್ ಸ್ಥಗಿತವಾಗುತ್ತಿತ್ತು. ಈ ಬಗ್ಗೆ ಇತ್ತೀಚೆಗೆ ರೈತರ ಮುಖಂಡರು, ಕೇಂದ್ರ ಸರ್ಕಾರದ ಮಧ್ಯೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಶ್ನೆ ಎತ್ತಿದ್ದರು. ಬಳಿಕ ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ ಮಾನ್, ಇಂಟರ್‌ನೆಟ್ ಸ್ಥಗಿತದ ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿಯೇ ಇಂಟರ್‌ನೆಟ್ ಸೇವೆ ಆರಂಭವಾಗಲಿದೆ ಎಂದು ಹೇಳಿದ್ದರು.
ಆದರೆ, ಈಗ ಫೆಬ್ರವರಿ 24ರ ವರೆಗೆ ಪಂಜಾಬ್‌ನ ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ರದ್ದು ಮಾಡಿ ಆದೇಶಿಸಲಾಗಿದೆ. ಹೀಗಾಗಿ ಪಂಜಾಬ್ ಸರ್ಕಾರದ ಒಪ್ಪಿಗೆ ಪಡೆಯದೆ ಕೇಂದ್ರವು ರಾಜ್ಯದಲ್ಲಿ ಇಂಟರ್‌ನೆಟ್ ಸೇವೆಯನ್ನು ಹೇಗೆ ನಿಲ್ಲಿಸುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದೆಡೆ, ಕೇಂದ್ರ ಸರ್ಕಾರ ರೈತರ ಬೇಡಿಕೆಗಳ ಕುರಿತು ಇಂದು 4ನೇ ಸುತ್ತಿನ ಮಾತುಕತೆ ನಡೆಸಲು ಮುಂದಾಗಿದೆ. ಇದುವರೆಗೆ ಮೂರು ಸಭೆಗಳನ್ನು ನಡೆಸಲಾಗಿದೆ. ಆದರೆ, ಯಾವುದೂ ಫಲಪ್ರದವಾಗಿಲ್ಲ. ಹೀಗಾಗಿ ರೈತರು ತಮ್ಮ ಹೋರಾಟ ಮುಂದುವರೆಸಿದ್ದಾರೆ. ಆದ್ದರಿಂದ ಚಂಡೀಗಢದಲ್ಲಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರಾಯ್ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: ಶಂಭು ಗಡಿಯಲ್ಲಿ ರೈತರ 'ದಿಲ್ಲಿ ಚಲೋ' ಹೋರಾಟ ತೀವ್ರ: ಇಂದು 4ನೇ ಸುತ್ತಿನ ಮಾತುಕತೆ