ನವದೆಹಲಿ: ಸದ್ಯ ದೇಶದಲ್ಲಿ ಕ್ರಿಕೆಟ್ ಜ್ವರವಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ವಂಚಕರು ಇದೀಗ ಧೋನಿ ಹೆಸರಲ್ಲಿ ವಂಚನೆಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಟೆಲಿಕಾಂ ಇಲಾಖೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದು, ಮೋಸದ ಜಾಲಕ್ಕೆ ಬೀಳದಂತೆ ಸೂಚಿಸಿದೆ.
ಈ ಸಂಬಂಧ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟೆಲಿಕಾಂ ಇಲಾಖೆ, ವಂಚಕರು ಪ್ರಖ್ಯಾತ ಕ್ರಿಕೆಟಿಗ ಹಾಗೂ ಮಾಜಿ ಟೀ ಇಂಡಿಯಾ ನಾಯಕ ಧೋನಿ ಹೆಸರಲ್ಲಿ ವಂಚಿಸುತ್ತಿದ್ದಾರೆ. ಹಣಕ್ಕಾಗಿ ಇನ್ಸ್ಟಾಗ್ರಾಂನಲ್ಲಿ ಬೇಡಿಕೆ ಇಡುತ್ತಿದ್ದಾರೆ. ಈ ಸಂದೇಶ ಬಂದಲ್ಲಿ ಎಚ್ಚರಿಕೆ ವಹಿಸಿ. ಇದು ವಂಚಕರ ಜಾಲ ಎಂದು ತಿಳಿಸಿದ್ದಾರೆ.
'ಹಾಯ್ ನಾನು ಎಂಎಸ್ ಧೋನಿ. ನಾನು ನನ್ನ ವೈಯಕ್ತಿಕ ಖಾತೆಯಿಂದ ನಿಮಗೆ ಸಂದೇಶ ಕಳುಹಿಸುತ್ತಿದ್ದೇನೆ. ಸದ್ಯ ನಾನು ರಾಂಚಿಯ ಹೊರವಲಯದಲ್ಲಿದ್ದೇನೆ. ನಾನು ನನ್ನ ವಾಲೆಟ್ (ಪರ್ಸ್) ಮರೆತು ಬಂದಿದ್ದೇನೆ. ದಯಮಾಡಿ 600 ರೂ ಹಣವನ್ನು ನನಗೆ ಫೋನ್ ಪೇ ಮಾಡಿ. ನಾನು ಬಸ್ನಲ್ಲಿ ಮನೆಗೆ ಹೋದ ಬಳಿಕ ಹಿಂದಿರುಗಿಸುತ್ತೇನೆ' ಎಂಬ ಸಂದೇಶವನ್ನು ವಂಚಕರು ಇನ್ಸ್ಟಾಗ್ರಾಂನಲ್ಲಿ ಮಾಡುತ್ತಿದ್ದಾರೆ. ಇದರ ಸ್ಕ್ರೀನ್ ಶಾಟ್ ಅನ್ನು ಟೆಲಿಕಾಂ ಇಲಾಖೆ ಹಂಚಿಕೊಂಡಿದೆ. (ಐಎಎನ್ಎಸ್)
ಇದನ್ನೂ ಓದಿ: ತಿರುಪತಿ ವಿಶೇಷ ದರ್ಶನದ ಹೆಸರಿನಲ್ಲಿ ಧೋನಿಯ ಮ್ಯಾನೇಜರ್ಗೆ ವಂಚನೆ ಆರೋಪ: ಎಫ್ಐಆರ್ ದಾಖಲು