ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕೆಲವು ಪರೀಕ್ಷಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿ ಆದೇಶಿಸಿದೆ. ಮರು ಪರೀಕ್ಷೆಗೆ ದಿನಾಂಕ ಪ್ರಕಟಿಸಿದ ಬಳಿಕ ಇಂತಹ ಅರ್ಜಿಗಳನ್ನು ಪರಿಗಣಿಸುವುದು ಸೂಕ್ತವಲ್ಲ ಎಂದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಆಗಸ್ಟ್ 21ರಂದು ಸರ್ಕಾರವು ಹೊಸದಾಗಿ ಪರೀಕ್ಷೆ ನಡೆಸುತ್ತಿದೆ. ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈಗಿನ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಈ ಹಂತದಲ್ಲಿ ಪರೀಕ್ಷೆಗೆ ಅಡ್ಡಿ ಬರುವುದು ಭಾರೀ ಅವ್ಯವಸ್ಥೆಗೆ ಕಾರಣವಾಗಲಿದೆ ಎಂದು ಪೀಠ ಹೇಳಿತು.
ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದ ಅವಾಂತರಗಳ ಬಳಿಕ ಕೇಂದ್ರ ಸರ್ಕಾರ ಮತ್ತು ಪರೀಕ್ಷಾ ಏಜೆನ್ಸಿಗಳು ಎಚ್ಚರಿಕೆ ವಹಿಸಬೇಕಿತ್ತು. ಆ ಪರೀಕ್ಷೆಯಲ್ಲಿ ಕೆಲ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು. ಇದೀಗ ಯುಜಿಸಿ-ನೆಟ್ ಪರೀಕ್ಷೆಗೆ ಅಂತಿಮ ದಿನಾಂಕ ಪ್ರಕಟಿಸಲಾಗಿದ್ದು, ಅದು ಮುಂದುವರಿಯಲಿ ಎಂದು ಕೋರ್ಟ್ ಸೂಚಿಸಿದೆ.
ಇನ್ನೂ, ಅರ್ಜಿ ಸಲ್ಲಿಸಿದ ವಕೀಲರ ಬಗ್ಗೆ ಟೀಕಿಸಿದ ಕೋರ್ಟ್, ಪರೀಕ್ಷೆಯ ರದ್ದನ್ನೇ ತೆರವು ಮಾಡಬೇಕು ಎಂದು ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ಅವರೇಕೆ ಮೂಗು ತೂರಿಸಿದ್ದಾರೆ. ನೊಂದ ವಿದ್ಯಾರ್ಥಿಗಳು ಬೇಕಾದರೆ, ಇದನ್ನು ಪ್ರಶ್ನಿಸಲಿ. ವಕೀಲರ ಅರ್ಜಿಯನ್ನು ವಿಚಾರಣೆ ನಡೆಸಲಾಗದು ಎಂದು ವಜಾ ಮಾಡಿತು.
ಹೊಸ ದಿನಾಂಕ ಪ್ರಕಟಿಸಿದ್ದ ಎನ್ಟಿಎ: ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ರದ್ದಾಗಿರುವ ಯುಜಿಸಿ- ನೆಟ್ ಜೂನ್ 2024 (ಯುಜಿಸಿ- ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ಹೊಸ ದಿನಾಂಕವನ್ನು ಘೋಷಣೆ ಮಾಡಿದೆ. ಹೊಸ ವೇಳಾಪಟ್ಟಿ ಪ್ರಕಾರ, ಆಗಸ್ಟ್ 21ರಿಂದ ಸೆಪ್ಟೆಂಬರ್ 4ರ ನಡುವೆ ಪರೀಕ್ಷೆ ನಡೆಯಲಿದೆ.
ಉಳಿದಂತೆ ಜಾಯಿಂಟ್ ಸಿಎಸ್ಐಆರ್ ಯುಜಿಜಿಸಿ ನೆಟ್ (Joint CSIR UGC NET) ಹಾಗೂ ಎನ್ಸಿಇಟಿ (National Common Entrance Test) 2024 ಪರೀಕ್ಷೆಗಳಿಗೂ ಹೊಸ ದಿನಾಂಕಗಳು ಪ್ರಕಟವಾಗಿವೆ. ಜಾಯಿಂಟ್ ಸಿಎಸ್ಐಆರ್ ಯುಜಿಜಿಸಿ ನೆಟ್ ಪರೀಕ್ಷೆಯನ್ನು ಜುಲೈ 25ರಿಂದ ಜುಲೈ 27ರವರೆಗೆ ಹಾಗೂ ಎನ್ಸಿಇಟಿ ಪರೀಕ್ಷೆಯನ್ನು ಜುಲೈ 10ರಂದು ನಡೆಯಲಿವೆ.
ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮೂರೂ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಹಿಂದೆ ರದ್ದುಗೊಂಡ ಪರೀಕ್ಷೆಯನ್ನು ಓಎಮ್ಆರ್ ಶೀಟ್ ಮೂಲಕ ನಡೆಸಲಾಗಿತ್ತು. ಈ ಬಾರಿ ಪರೀಕ್ಷೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್ನಲ್ಲಿ ನಡೆಯಲಿದೆ.