ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ, ತರೂರ್ ಅವರ ಮನವಿಯ ಮೇರೆಗೆ ನೋಟಿಸ್ ಜಾರಿಗೊಳಿಸಿ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ತಡೆ ನೀಡಿತು. ತರೂರ್ ಇಂದು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕಿತ್ತು.
ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ತರೂರ್ ಅವರು ಆಗಸ್ಟ್ 29 ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 2012ರಲ್ಲಿ ಸುದ್ದಿ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ನರೇಂದ್ರ ಮೋದಿ ಅವರನ್ನು ಶಿವಲಿಂಗದ ಮೇಲೆ ಕುಳಿತಿರುವ ಚೇಳಿಗೆ ಹೋಲಿಸಿ ಆರ್ಎಸ್ಎಸ್ ನಾಯಕರೊಬ್ಬರು ನೀಡಿದ್ದ ಹೇಳಿಕೆಯನ್ನು ತಮ್ಮ ಕಕ್ಷಿದಾರ ಉಲ್ಲೇಖಿಸಿದ್ದಾರೆ ಎಂದು ತರೂರ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ತರೂರ್ ಪರ ವಕೀಲರ ವಾದವೇನು?: ಸುದ್ದಿ ನಿಯತಕಾಲಿಕದ ಲೇಖನದಲ್ಲಿ ನರೇಂದ್ರ ಮೋದಿ ಅವರನ್ನು ಶಿವಲಿಂಗದ ಮೇಲೆ ಕುಳಿತಿರುವ ಚೇಳಿಗೆ ಹೋಲಿಸಿದ್ದ ವ್ಯಕ್ತಿಯು ನಂತರ ಸುದ್ದಿ ವಾಹಿನಿಯಲ್ಲಿ ಅದೇ ಹೇಳಿಕೆಯನ್ನು ಪುನರಾವರ್ತಿಸಿದ್ದಾನೆ. ಬಿಜೆಪಿ ನಾಯಕ ರಾಜೀವ್ ಬಬ್ಬರ್ ಅವರು ದಾಖಲಿಸಿರುವ ದೂರಿನಲ್ಲಿ ನಿಯತಕಾಲಿಕೆ ಅಥವಾ ಹೇಳಿಕೆ ನೀಡಿದ ವ್ಯಕ್ತಿಯನ್ನು ಆರೋಪಿಯನ್ನಾಗಿ ಮಾಡಿಲ್ಲ ಎಂದು ತರೂರ್ ಪರ ವಕೀಲರು ವಾದಿಸಿದರು.
ಇದು ಅಂತಿಮವಾಗಿ ವ್ಯಕ್ತಿಯ ಬಗೆಗಿನ ರೂಪಕವಾಗಿದೆ ಎಂದು ನ್ಯಾಯಪೀಠ ಗಮನಿಸಿತು ಮತ್ತು ಈ ರೂಪಕ ವ್ಯಕ್ತಿಯ ಗುಣವನ್ನು ಸೂಚಿಸುತ್ತದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೇ? ರೂಪಕವನ್ನು ಯಾರಾದರೂ ಏಕೆ ಆಕ್ಷೇಪಿಸುತ್ತಾರೆ ಎಂದು ನ್ಯಾಯಪೀಠ ಪ್ರಶ್ನಿಸಿತು. ವಾದ-ಪ್ರತಿವಾದ ಆಲಿಸಿದ ಬಳಿಕ ಸುಪ್ರೀಂಕೋರ್ಟ್ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣ ಹಿನ್ನೆಲೆ ಏನು?: 2018 ರಲ್ಲಿ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಮಾತನಾಡುವಾಗ ತರೂರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿದ್ದರು ಮತ್ತು ಇದನ್ನು "ಅಸಾಧಾರಣ ಗಮನಾರ್ಹ ರೂಪಕ" ಎಂದು ಬಣ್ಣಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು 'ಶಿವಲಿಂಗದ ಮೇಲೆ ಚೇಳು' ಎಂಬ ಹೇಳಿಕೆ ನೀಡಿದ ಆರೋಪದ ಮೇಲೆ ತರೂರ್ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು. ಪ್ರಧಾನಮಂತ್ರಿಯವರ ವಿರುದ್ಧ "ಶಿವಲಿಂಗದ ಮೇಲೆ ಚೇಳು" ಎಂಬಂತಹ ಹೇಳಿಕೆ "ಹೇಯ ಮತ್ತು ಶೋಚನೀಯ" ಎಂದು ಹೈಕೋರ್ಟ್ ಹೇಳಿತ್ತು. ತರೂರ್ ವಿರುದ್ಧ ದೆಹಲಿ ಬಿಜೆಪಿ ಉಪಾಧ್ಯಕ್ಷ ರಾಜೀವ್ ಬಬ್ಬರ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಭಾರತದ ಪ್ರಜಾಪ್ರಭುತ್ವಕ್ಕೆ ರಾಹುಲ್ ಗಾಂಧಿ ಕಪ್ಪು ಚುಕ್ಕೆ: ಬಿಜೆಪಿ ಆರೋಪ - BJP slams Rahul Gandhi