ನವದೆಹಲಿ: ನ್ಯೂಸ್ಕ್ಲಿಕ್ ವೆಬ್ ಪೋರ್ಟಲ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ಇದೇ ವೇಳೆ, ಪುರಕಾಯಸ್ಥ ಅವರ ಬಂಧನ ಮತ್ತು ನಂತರದ ರಿಮಾಂಡ್ ಪ್ರಕ್ರಿಯೆ ಕಾನೂನಿನ ದೃಷ್ಟಿಯಲ್ಲಿ ಅಸಿಂಧು ಎಂದು ಸರ್ವೋಚ್ಛ ನ್ಯಾಯಾಲಯ ಘೋಷಿಸಿದೆ.
ಚೀನಾ ಪರ ಪ್ರಚಾರ ಮಾಡಲು ಹಣ ಪಡೆದ ಆರೋಪದಡಿ ನ್ಯೂಸ್ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸರು 2023ರ ಅಕ್ಟೋಬರ್ 3ರಂದು ಬಂಧಿಸಿದ್ದರು. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ-ಯುಎಪಿಎ ಅಡಿ ಪ್ರಕರಣ ದಾಖಲಿಸಿದ್ದರು. ಇದೀಗ ಏಳು ತಿಂಗಳ ನಂತರ ಸುಪ್ರೀಂ ಕೋರ್ಟ್ ಪ್ರಬೀರ್ ಪುರಕಾಯಸ್ಥ ಅವರ ಬಂಧನವನ್ನೇ ಅಸಿಂಧು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯ ಪೀಠವು ಈ ಆದೇಶ ನೀಡಿದೆ. ಪುರಕಾಯಸ್ಥ ಬಂಧನವನ್ನು ಗುಟ್ಟಿನ ರೀತಿಯಲ್ಲಿ ಮಾಡಲಾಗಿದೆ. ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ತಪ್ಪಿಸಲು ಒಂದು ಅಬ್ಬರದ ಪ್ರಯತ್ನವದೇ ಬೇರೇನೂ ಅಲ್ಲ ಎಂದೂ ಟೀಕಿಸಿದೆ. ಬಂಧನದ ಕಾರಣಗಳ ಬಗ್ಗೆ ಲಿಖಿತ ಸಂವಹನದಲ್ಲಿ ರಿಮಾಂಡ್ ಅರ್ಜಿಯ ನಕಲನ್ನು ಆರೋಪಿ, ಮೇಲ್ಮನವಿದಾರರು ಅಥವಾ ಅವರ ವಕೀಲರಿಗೆ ಒದಗಿಸಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ನ್ಯಾಯಾಲಯದ ಮನಸ್ಸಿನಲ್ಲಿ ಯಾವುದೇ ಹಿಂಜರಿಕೆಯಿಲ್ಲ ಎಂದು ತಿಳಿಸಿದೆ.
ಪುರಕಾಯಸ್ಥ ಪರ ಹಿರಿಯ ವಕೀಲ ಕಪಿಲ್ ಸಿಬಲ್, ವಕೀಲರಾದ ಅರ್ಷದೀಪ್ ಖುರಾನಾ ಮತ್ತು ನಿತಿನ್ ಸಲೂಜಾ ಹಾಜರಿದ್ದರು. ಸಿಬಲ್ ವಾದ ಮಂಡಿಸಿ, ತನ್ನ ಕಕ್ಷಿದಾರನನ್ನು ಬಂಧಿಸುವ ಸಮಯದಲ್ಲಿ ಮತ್ತು ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವ ಮೊದಲು ಬಂಧನದ ಆಧಾರವನ್ನು ಒದಗಿಸಿಲ್ಲ. ಆದ ಕಾರಣ ಸಂವಿಧಾನದ 22(1)ನೇ ಪರಿಚ್ಛೇದದಡಿ ಅವರ ಕಸ್ಟಡಿಯು ಕಾನೂನುಬಾಹಿರವಾಗಿದೆ ಎಂದು ಹೇಳಿದರು.
ಈ ವೇಳೆ, 2023ರ ಪಂಕಜ್ ಬನ್ಸಾಲ್ ಪ್ರಕರಣ ತೀರ್ಪಿವನ್ನೂ ಸಿಬಲ್ ಉಲ್ಲೇಖಿಸಿದರು. ಪಂಕಜ್ ಬನ್ಸಾಲ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಲ್ಲಿ ಆರೋಪಿಗಳ ಬಂಧನದ ಆಧಾರವನ್ನು ಲಿಖಿತವಾಗಿ ಬಹಿರಂಗಪಡಿಸಲು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದೆ. ಈ ಪ್ರಕರಣದ ತೀರ್ಪಿನ ವ್ಯಾಪ್ತಿಯನ್ನು ಭಯೋತ್ಪಾದನಾ ನಿಗ್ರಹ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಥವಾ ಇತರ ಯಾವುದೇ ಅಪರಾಧಗಳಿಗೂ ಸುಪ್ರೀಂ ಕೋರ್ಟ್ ವಿಸ್ತರಿಸಿದೆ.
ಸಿಬಲ್ ವಾದ ಆಲಿಸಿದ ನ್ಯಾಯ ಪೀಠವು, ಕಸ್ಟಡಿಯಲ್ಲಿರುವ ಯಾವುದೇ ವ್ಯಕ್ತಿಗೆ ಆತನನ್ನು ಏಕೆ ಬಂಧಿಸಲಾಗಿದೆ ಎಂಬುವುದಾಗಿ ತಿಳಿಸಬೇಕು ಎಂದು ಆರ್ಟಿಕಲ್ 22(1) ಹೇಳುತ್ತದೆ. ಆರ್ಟಿಕಲ್ 22(5) ಬಗ್ಗೆ ಹೇಳುವುದಾದರೆ, ಯಾವುದೇ ವ್ಯಕ್ತಿಯನ್ನು ಬಂಧನದ ಆದೇಶವನ್ನು ಯಾವ ಆಧಾರದ ಮೇಲೆ ಮಾಡಲಾಗಿದೆ ಎಂದು ತಿಳಿಸಬೇಕು. ಈ ಸಾಂವಿಧಾನಿಕ ಅಗತ್ಯತೆ ಮತ್ತು ಶಾಸನಬದ್ಧ ಆದೇಶವನ್ನು ಅನುಸರಿಸದಿರುವ ಬಂಧನ ಅಥವಾ ರಿಮಾಂಡ್ ಅನ್ನು ಕಾನೂನುಬಾಹಿರವೆಂದು ಪೀಠವು ಒತ್ತಿ ಹೇಳಿದೆ.
ಮತ್ತೊಂದೆಡೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಪ್ರತಿವಾದ ಮಂಡಿಸಿ, ಸಂವಿಧಾನದ 22 (1) ಮತ್ತು 22 (5) ವಿಧಿಗಳಲ್ಲಿ ಒಳಗೊಂಡಿರುವ ನಿಬಂಧನೆಗಳನ್ನು ಉಲ್ಲೇಖಿಸಿ, ಬಂಧನ ಅಥವಾ ಬಂಧನದ ಕಾರಣಗಳನ್ನು ಆರೋಪಿಗೆ ಅಥವಾ ಬಂಧಿತನಿಗೆ ಲಿಖಿತವಾಗಿ ತಿಳಿಸಬೇಕು ಎಂಬ ಯಾವುದೇ ನಿಬಂಧನೆಗಳಲ್ಲಿ ಯಾವುದೇ ಆದೇಶವಿಲ್ಲ ಎಂದರು. ಆದರೆ, ಪುರಕಾಯಸ್ಥ ಅವರ ಬಂಧನ ಮತ್ತು ರಿಮಾಂಡ್ ಕುರಿತಂತೆ ಸಂಪೂರ್ಣ ಪ್ರಕ್ರಿಯೆಯನ್ನು ರಹಸ್ಯ ರೀತಿಯಲ್ಲಿ ಮಾಡಲಾಗಿದೆ ಎಂದು ನ್ಯಾಯ ಪೀಠ ಸ್ಪಷ್ಟವಾಗಿ ಹೇಳಿತು.
ಅಲ್ಲದೇ, ಇದು ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಅಬ್ಬರದ ಪ್ರಯತ್ನವಲ್ಲದೇ ಬೇರೇನೂ ಅಲ್ಲ. ಆರೋಪಿಯನ್ನು ಯಾವ ಆಧಾರದ ಮೇಲೆ ಬಂಧಿಸಲಾಗಿದೆ ಎಂಬುದನ್ನು ತಿಳಿಸದೇ ಪೊಲೀಸ್ ಕಸ್ಟಡಿಗೆ ಒಪ್ಪಿಸುವುದು, ಆರೋಪಿಯು ತನ್ನ ಆಯ್ಕೆಯ ವಕೀಲರ ಸೇವೆ ಪಡೆಯುವ ಅವಕಾಶವನ್ನು ಕಸಿದುಕೊಳ್ಳುವುದು. ಈ ಮೂಲಕ ಪೊಲೀಸ್ ಕಸ್ಟಡಿಯನ್ನು ಪ್ರಶ್ನಿಸಿ ಜಾಮೀನು ಕೋರುವ ಮತ್ತು ನ್ಯಾಯಾಲಯವನ್ನು ದಾರಿ ತಪ್ಪಿಸುವ ಕ್ರಮ ಎಂದು ನ್ಯಾಯ ಪೀಠ ಕಿಡಿಕಾರಿತು.
ಪ್ರಬೀರ್ ಪುರಕಾಯಸ್ಥ ಪ್ರಕರಣದಲ್ಲಿ 2023ರ ಆಗಸ್ಟ್ 17ರಂದೇ ಎಫ್‌ಐಆರ್ ಅನ್ನು ದಾಖಲಿಸಲಾಗಿತ್ತು. ಆದರೆ, ಪೊಲೀಸ್ ಕಸ್ಟಡಿ ಆದೇಶ ಹೊರಡಿಸುವವರೆಗೆ ಆರೋಪಿ, ಮೇಲ್ಮನವಿದಾರರು ಅರ್ಜಿ ಸಲ್ಲಿಸಿದ್ದರೂ ಬಂಧನದ ಆದೇಶದ ಪ್ರತಿಯನ್ನು ಒದಗಿಸಿರಲಿಲ್ಲ. ಇದನ್ನು ಗಮನಿಸಿದ ನ್ಯಾಯ ಪೀಠವು ಆರೋಪಿಗೆ ಬಂಧನಕ್ಕೊಳಗಾದ ಎಲ್ಲ ಮೂಲಭೂತ ಸಂಗತಿಗಳನ್ನು ತಿಳಿಸಬೇಕು. ಕಸ್ಟಡಿ ರಿಮಾಂಡ್ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ಜಾಮೀನು ಪಡೆಯಲು ಅವಕಾಶವನ್ನು ಒದಗಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನ್ಯೂಸ್ಕ್ಲಿಕ್ ಸಂಪಾದಕ ಪುರಕಾಯಸ್ಥ