ನವದೆಹಲಿ: ಸುಪ್ರೀಂ ಕೋರ್ಟ್ ತನ್ನ ಅಸಾಧಾರಣ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಿದೆ. ತೀವ್ರ ಸಂಕಷ್ಟದಲ್ಲಿರುವ ಏರ್ ಕ್ಯಾರಿಯರ್ ಜೆಟ್ ಏರ್‌ವೇಸ್‌ನ ಆಸ್ತಿಗಳನ್ನು ದಿವಾಳಿ ಎಂದು ಘೋಷಿಸುವಂತೆ ಗುರುವಾರ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಜೆಟ್ ಏರ್‌ವೇಸ್‌ನ ರೆಸಲ್ಯೂಶನ್ ಯೋಜನೆಯನ್ನು ಎತ್ತಿಹಿಡಿದಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ತೀರ್ಪನ್ನು ರದ್ದು ಮಾಡಿತು. ಜೊತೆಗೆ ಸಂಸ್ಥೆಯ ಮಾಲೀಕತ್ವವನ್ನು ಜಲನ್ ಕಲ್ರಾಕ್ ಕನ್ಸೋರ್ಟಿಯಂ (ಜೆಕೆಸಿ) ಗೆ ವರ್ಗಾಯಿಸಲು ಸೂಚಿಸಿತು.
ಜೆಟ್ ಏರ್‌ವೇಸ್‌ನ ರೆಸಲ್ಯೂಶನ್ ಯೋಜನೆಯನ್ನು ಎತ್ತಿಹಿಡಿದ ಎನ್‌ಸಿಎಲ್‌ಎಟಿ ನಿರ್ಧಾರದ ವಿರುದ್ಧ ಎಸ್‌ಬಿಐ ಮತ್ತು ಇತರ ಸಾಲ ನೀಡಿದ ಸಂಸ್ಥೆಗಳು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದವು. ಇವುಗಳ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ಪ್ರಕಟಿಸಿತು.
ಜೆಟ್ ಏರ್‌ವೇಸ್ ಸಂಸ್ಥೆಯು ದಿವಾಳಿ ಎಂದು ಘೋಷಿಸಿರುವುದು, ಸಾಲಗಾರರು, ಕಾರ್ಮಿಕರು ಮತ್ತು ಇತರ ಮಧ್ಯಸ್ಥಗಾರರ ಹಿತಾಸಕ್ತಿ ಕಾಪಾಡುವುದಾಗಿದೆ. ರೆಸಲ್ಯೂಶನ್ ಯೋಜನೆಯನ್ನು ಎತ್ತಿ ಹಿಡಿದ NCLAT ನಿರ್ಧಾರ ಸರಿಯಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.
ವಿಶೇಷಾಧಿಕಾರ ಬಳಸಿದ ಕೋರ್ಟ್: ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ 142 ನೇ ವಿಧಿಯ ಅಡಿ ತನ್ನ ವಿಶೇಷಾಧಿಕಾರವನ್ನು ಪ್ರಕರಣದಲ್ಲಿ ಬಳಸಿತು. ಯಾವುದೇ ಪ್ರಕರಣದಲ್ಲಿ ನ್ಯಾಯವನ್ನು ಒದಗಿಸಲು ಸೂಕ್ತ ಆದೇಶ ಮತ್ತು ತೀರ್ಪುಗಳನ್ನು ಮಾಡುವ ಅಧಿಕಾರವನ್ನು ನೀಡುತ್ತದೆ.
ಮಾರ್ಚ್ 12 ರಂದು NCLAT ಗ್ರೌಂಡ್ಡ್ ಏರ್ ಕ್ಯಾರಿಯರ್ನ ರೆಸಲ್ಯೂಶನ್ ಯೋಜನೆಯನ್ನು ಎತ್ತಿಹಿಡಿದಿತ್ತು. ಇದನ್ನು ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತು ಜೆಸಿ ಫ್ಲವರ್ಸ್ ಅಸೆಟ್ ರೀಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಪ್ರಶ್ನಿಸಿದ್ದವು.
ಏನಿದು ಪ್ರಕರಣ: ಜೆಟ್ ಏರ್‌ವೇಸ್ ಸ್ಥಾಪಕ ನರೇಶ್ ಗೋಯಲ್ ಅವರು ವಿವಿಧ ಬ್ಯಾಂಕ್ಗಳಿಂದ ಸಾಲ ಪಡೆದಿದ್ದು, ಸಂಸ್ಥೆ ದಿವಾಳಿಯಾಗಿದೆ ಎಂದು ಘೋಷಿಸಿದ್ದರು. ಕೆನರಾ ಬ್ಯಾಂಕ್ನಿಂದ 538 ಕೋಟಿ ರೂಪಾಯಿ ಸಾಲ ಪಡೆದು, ವಂಚಿಸಿದ ಪ್ರಕರಣದಲ್ಲಿ ಅವರನ್ನು ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಬಂಧಿಸಿದ್ದಾರೆ.
1992ರಲ್ಲಿ ಪ್ರಾರಂಭವಾಗಿದ್ದ ಜೆಟ್ ಏರ್‌ವೇಸ್ ಭಾರತದ ಅತಿದೊಡ್ಡ ಖಾಸಗಿ ಏರ್ಲೈನ್ಸ್ ಆಗಿತ್ತು. 2019ರಲ್ಲಿ ಕಂಪನಿ ದಿವಾಳಿಯಾಗಿದೆ ಎಂದು ಘೋಷಿಸಿಕೊಂಡಿತ್ತು. ಜೊತೆಗೆ ವಿಮಾನಗಳ ಹಾರಾಟವನ್ನೂ ನಿಲ್ಲಿಸಲಾಗಿತ್ತು. 2021 ರಲ್ಲಿ ಏರ್‌ವೇಸ್ ಅನ್ನು ಜಲನ್ ಕಾಲ್ರಾಕ್ ಒಕ್ಕೂಟ ಸ್ವಾಧೀನಪಡಿಸಿಕೊಂಡಿದೆ.
ಇದನ್ನೂ ಓದಿ: 'ಜೈಲಲ್ಲೇ ಸಾಯಲು ಬಿಡಿ': ಕೋರ್ಟಿನಲ್ಲಿ ಜೆಟ್ ಏರ್‌ವೇಸ್ ಸ್ಥಾಪಕ ನರೇಶ್ ಗೋಯಲ್ ಕಣ್ಣೀರು