ನವದೆಹಲಿ: ಚುನಾವಣಾ ಬಾಂಡ್ಗಳ ಮಾರಾಟ ಮತ್ತು ಅವುಗಳನ್ನು ಎನ್ಕ್ಯಾಶ್ ಮಾಡಿದ್ದರ ಬಗ್ಗೆ ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಅರ್ಜಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನಿರಾಕರಿಸಿದೆ. 'ವಾಣಿಜ್ಯ ಗೌಪ್ಯತೆ' ಕಾಪಾಡುವ ನಿಟ್ಟಿನಲ್ಲಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದೆ.
ದೇಶದಲ್ಲಿನ ಎಸ್ಬಿಐ ಶಾಖೆಗಳಲ್ಲಿ ಚುನಾವಣಾ ಬಾಂಡ್ಗಳನ್ನು ಖರೀದಿಸಿ, ಅವುಗಳನ್ನು ರಾಜಕೀಯ ಪಕ್ಷಗಳು ಎನ್ಕ್ಯಾಶ್ ಮಾಡಿಕೊಂಡ ಬಗ್ಗೆ ಮಾಹಿತಿ ನೀಡಬೇಕು ಎಂದು ಕೋರಿ ಆರ್ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಎಂಬವರು ಅರ್ಜಿ ಸಲ್ಲಿಸಿದ್ದರು.
ಚುನಾವಣಾ ಬಾಂಡ್ ಯೋಜನೆಯಡಿ ಖರೀದಿಸಲಾದ ಬಾಂಡ್ಗಳ ಮಾಹಿತಿಯನ್ನು ಗೌಪ್ಯವಾಗಿ ಇಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಅದನ್ನು ಯಾವುದೇ ಕಾರಣಕ್ಕೂ ಆರ್ಟಿಐನಡಿ ಮಾಹಿತಿ ನೀಡಲು ಸಾಧ್ಯವಿಲ್ಲ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಎಸ್‌ಬಿಐನ ಉಪ ಪ್ರಧಾನ ವ್ಯವಸ್ಥಾಪಕ ಎಂ.ಕನ್ನಬಾಬು ಅವರು ಮಾರ್ಚ್ 30ರಂದು ಉತ್ತರಿಸಿದ್ದಾರೆ.
ಆರ್ಟಿಐ ಕಾಯ್ದೆಯ ಸೆಕ್ಷನ್ 8(1)(d) ಅಡಿಯಲ್ಲಿ ವಾಣಿಜ್ಯ ಗೌಪ್ಯತೆ, ಬೌದ್ಧಿಕ ಆಸ್ತಿ ಸೇರಿದಂತೆ ಹಲವು ವ್ಯಾಪಾರ ಸಂಬಂಧಿತ ವಿಷಯಗಳಿಗೆ ಮಾಹಿತಿ ಬಹಿರಂಗದಿಂದ ವಿನಾಯಿತಿ ನೀಡಲಾಗಿದೆ. ಇದು ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಹಿನ್ನೆಲೆಯಲ್ಲಿ, ಮೂರನೇ ವ್ಯಕ್ತಿಯ ಸ್ಥಾನಕ್ಕೆ ಹಾನಿಯಾಗುವ ಸಾಧ್ಯತೆ ಹಿನ್ನೆಲೆ ಅಂತಹ ಮಾಹಿತಿಯ ಬಹಿರಂಗಪಡಿಸುವಿಕೆ ಸಾಧ್ಯವಿಲ್ಲ ಎಂದಿದ್ದಾರೆ.
ಆರ್ಟಿಐ ಕಾರ್ಯಕರ್ತೆ ಅಸಮಾಧಾನ: ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಮತ್ತು ಎಲ್ಲ ಪೂರ್ಣ ಮಾಹಿತಿಯನ್ನು ಬಹಿರಂಗ ಮಾಡಲು ನಿರ್ದೇಶಿಸಿದ ಬಳಿಕವೂ, ಅವುಗಳ ಖರೀದಿ ಮತ್ತು ಹಣವನ್ನಾಗಿ ಪಡೆದುಕೊಂಡ ಬಗ್ಗೆ ಎಸ್ಬಿಐ ಮಾಹಿತಿ ನೀಡಲು ನಿರಾಕರಿಸುತ್ತಿರುವುದು ಆಘಾತ ತಂದಿದೆ ಎಂದು ಆರ್ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಹೇಳಿದ್ದಾರೆ.
ಚುನಾವಣಾ ಬಾಂಡ್ಗಳ ಮಾಹಿತಿಯ ಬಹಿರಂಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದಾಗಲೂ ಬ್ಯಾಂಕ್ 4 ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿತ್ತು. ಪೂರ್ಣ ಮಾಹಿತಿಯನ್ನು ಡೇಟಾವಾಗಿ ಸಂಗ್ರಹಿಸಿಲ್ಲ. ಹೀಗಾಗಿ ಸಂಯೋಜನೆ ಸಮಯ ಹಿಡಿಯುವ ಕಾರಣ ಹೆಚ್ಚುವರಿ ಸಮಯ ಕೇಳಿತ್ತು. ಇದು ಎಸ್ಒಪಿಯನ್ನ ಮರೆಮಾಚುವ ಯತ್ನ ಎಂದು ಅವರು ಆರೋಪಿಸಿದ್ದಾರೆ.
ಎಸ್ಬಿಐನಿಂದ ಕೋರ್ಟ್ಗೆ ಮಾಹಿತಿ: ಚುನಾವಣಾ ಬಾಂಡ್ಗಳ ಕುರಿತ ಪೂರ್ಣ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಪೂರ್ಣ ಮಾಹಿತಿ ನೀಡಲಾಗಿದೆ. ಈವರೆಗೂ 22,217 ಬಾಂಡ್ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ರಾಜಕೀಯ ಪಕ್ಷಗಳು 22,030 ಬಾಂಡ್ಗಳನ್ನು ಎನ್ಕ್ಯಾಶ್ ಮಾಡಿಕೊಂಡಿವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು.
ಪ್ರತಿ ಚುನಾವಣಾ ಬಾಂಡ್‌ನ ಖರೀದಿ ದಿನಾಂಕ, ಖರೀದಿಸಿದವರ ಹೆಸರು, ಬಾಂಡ್‌ನ ಮುಖಬೆಲೆ, ಯಾವ ಪಕ್ಷಕ್ಕೆ ದೇಣಿಗೆ, ಬಾಂಡ್ ನಗದೀಕರಿಸಿದ್ದು ಸೇರಿದಂತೆ ಎಲ್ಲ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ ಎಂದು ಎಸ್ಬಿಐ ಹೇಳಿತ್ತು. ಆದರೆ, ಇದರಲ್ಲಿ ಯಾವಾಗ, ಯಾರು, ಯಾರಿಗೆ ಬಾಂಡ್ ನೀಡಿದ್ದಾರೆ ಎಂಬ ಮಾಹಿತಿ ಇಲ್ಲ. ಅದನ್ನೂ ನೀಡುವಂತೆ ಸುಪ್ರೀಂಕೋರ್ಟ್ ಬ್ಯಾಂಕ್ಗೆ ತಾಕೀತು ಮಾಡಿದೆ.
ಇದನ್ನೂ ಓದಿ: ಚುನಾವಣಾ ಬಾಂಡ್ಗಳ ಹೊಸ ಮಾಹಿತಿ ಬಹಿರಂಗ: ಬಿಜೆಪಿಗೆ ₹ 6,987 ಕೋಟಿ, ಜೆಡಿಎಸ್ಗೆ ₹ 89.75 ಕೋಟಿ ದೇಣಿಗೆ