ನವದೆಹಲಿ: ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ವಿವರಗಳನ್ನು ಬಹಿರಂಗಪಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಿರಾಕರಿಸಿದೆ. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಸಾರ್ವಜನಿಕಗೊಳಿಸಲಾಗಿದ್ದರೂ ಸಹ ಇದು ವಿಶ್ವಾಸಾರ್ಹತೆ ಮತ್ತು ವೈಯಕ್ತಿಕವಾಗಿರುವ ಮಾಹಿತಿ ಎಂದು ಎಸ್‌ಬಿಐ ಹೇಳಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ಕುರಿತಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 15ರಂದು ರದ್ದುಗೊಳಿಸಿತ್ತು. ಇದೊಂದು ಅಸಾಂವಿಧಾನಿಕ ಮತ್ತು ಅನಿಯಂತ್ರಿತವಾಗಿದೆ ಎಂದು ತೀರ್ಪು ನೀಡಿದ್ದ ಸರ್ವೋಚ್ಛ ನ್ಯಾಯಾಲಯವು 2019ರ ಎಪ್ರಿಲ್ 12ರಿಂದ ಖರೀದಿಸಿದ ಬಾಂಡ್‌ಗಳ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಮತ್ತು ಮಾರ್ಚ್ 13ರೊಳಗೆ ಆಯೋಗದ ವೆಬ್ಸೈಟ್ ಮೂಲಕ ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಸೂಚಿಸಿತ್ತು.
ಮತ್ತೊಂದೆಡೆ, ಚುನಾವಣಾ ಬಾಂಡ್‌ಗಳ ಮಾಹಿತಿ ಬಹಿರಂಗಪಡಿಸುವ ಅವಧಿಯನ್ನು ವಿಸ್ತರಣೆ ಮಾಡುವಂತೆ ಕೋರಿ ಎಸ್‌ಬಿಐ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು. ಆದರೆ, ಮಾರ್ಚ್ 11ರಂದು ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಅಂತೆಯೇ, ಮಾರ್ಚ್ 12ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಬಳಿಕ ಬಾಂಡ್‌ಗಳ ಮಾಹಿತಿಯನ್ನು ಬಹಿರಂಗಗೊಳಿಸಲಾಗಿತ್ತು.
ಈ ಬೆಳವಣಿಗೆ ನಂತರ ಆರ್‌ಟಿಐ ಕಾರ್ಯಕರ್ತರಾದ ನಿವೃತ್ತ ಕಮಾಂಡರ್ ಲೋಕೇಶ್ ಬಾತ್ರಾ ಮಾರ್ಚ್ 13ರಂದು ಚುನಾವಣಾ ಬಾಂಡ್ನ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಒದಗಿಸುವಂತೆ ಎಸ್ಬಿಐಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆರ್‌ಟಿಐ ಕಾಯ್ದೆಯ ಎರಡು ಸೆಕ್ಷನ್ಗಳನ್ನು ಉಲ್ಲೇಖಿಸಿ ಮಾಹಿತಿ ನೀಡಲು ನಿರಾಕರಿಸಲಾಗಿದೆ. ಆ ಸೆಕ್ಷನ್ಗಳೆಂದರೆ, ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) (ಇ) ಪ್ರಕಾರ, ವಿಶ್ವಾಸಾರ್ಹತೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಸೆಕ್ಷನ್ (1) (ಜೆ) ಪ್ರಕಾರ, ವೈಯಕ್ತಿಕ ಮಾಹಿತಿ ಬಹಿರಂಗಕ್ಕೆ ಅವಕಾಶ ನೀಡದೇ ಇರುವುದು ಎಂದು ಉಲ್ಲೇಖಿಸಲಾಗಿದೆ.
''ನೀವು ಕೋರಿದ ಮಾಹಿತಿಯು ಖರೀದಿದಾರರು ಮತ್ತು ರಾಜಕೀಯ ಪಕ್ಷಗಳ ವಿವರಗಳನ್ನು ಒಳಗೊಂಡಿದೆ. ಆದ್ದರಿಂದ ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಇ) ಮತ್ತು (ಜೆ) ಅಡಿಯಲ್ಲಿ ವಿನಾಯಿತಿ ಪಡೆದಿರುವ ವಿಶ್ವಾಸಾರ್ಹತೆ ಹೊಂದಿರುವ ಕಾರಣ ಬಹಿರಂಗಪಡಿಸಲಾಗುವುದಿಲ್ಲ'' ಎಂದು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಎಸ್‌ಬಿಐನ ಡೆಪ್ಯುಟಿ ಜನರಲ್ ಮ್ಯಾನೇಜರ್ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ, ಚುನಾವಣಾ ಬಾಂಡ್‌ಗಳ ದಾಖಲೆಗಳ ಬಹಿರಂಗಪಡಿಸುವಿಕೆಯ ವಿರುದ್ಧವಾಗಿ ತನ್ನ ಪರವಾಗಿ ವಾದಿಸಲು ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಗೆ ಎಸ್‌ಬಿಐ ಪಾವತಿಸಿದ ಶುಲ್ಕದ ವಿವರಗಳನ್ನೂ ಬಾತ್ರಾ ಕೋರಿದ್ದರು. ಈ ಮಾಹಿತಿ ಕೂಡ ವಿಶ್ವಾಸಾರ್ಹತೆ ಮತ್ತು ವೈಯಕ್ತಿಕ ಸ್ವರೂಪದ್ದಾಗಿದೆ ಎಂದು ಹೇಳಿ ನಿರಾಕರಿಸಲಾಗಿದೆ.
ಈ ಬಗ್ಗೆ ಅರ್ಜಿದಾರ ಬಾತ್ರಾ ಪ್ರತಿಕ್ರಿಯಿಸಿ, ''ಈಗಾಗಲೇ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಎಸ್‌ಬಿಐ ನಿರಾಕರಿಸಿರುವುದು ವಿಲಕ್ಷಣವೇ ಸರಿ. ಜತೆಗೆ, ವಕೀಲ ಸಾಳ್ವೆ ಅವರ ಶುಲ್ಕದ ಪ್ರಶ್ನೆಯು ತೆರಿಗೆದಾರರ ಹಣದ ಮಾಹಿತಿ ಆಗಿತ್ತು. ಇದನ್ನೂ ಬ್ಯಾಂಕ್ ನಿರಾಕರಿಸಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: 22,217 ಚುನಾವಣಾ ಬಾಂಡ್ ಖರೀದಿ, ಈ ಪೈಕಿ 22,030 ಎನ್ಕ್ಯಾಶ್: ಸುಪ್ರೀಂಗೆ ಮಾಹಿತಿ ನೀಡಿದ ಎಸ್‌ಬಿಐ