ಕೈಮೂರ್(ಬಿಹಾರ್): ಭೀಕರ ರಸ್ತೆ ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಮೊಹಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ2 ರಲ್ಲಿರುವ ದೇವಕಾಲಿ ಬಳಿ ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ.
ಕಾರೊಂದು ನಿಯಂತ್ರಣ ತಪ್ಪಿ ಕೆಲ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ಅಪಘಾತದ ಬಳಿಕ ಹೆದ್ದಾರಿಯಲ್ಲಿ ತುಂಬಾ ಹೊತ್ತು ವಾಹನಸಂದಣಿ ಕಂಡುಬಂತು. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಎನ್‌ಎಚ್‌ಎಐ ತಂಡವು ಕಾರಿನಿಂದ ಮೃತದೇಹಗಳನ್ನು ಹೊರತೆಗೆದರು.
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಸ್ಕಾರ್ಪಿಯೋದಲ್ಲಿ ಪ್ರಯಾಣಿಸುತ್ತಿದ್ದ 8 ಜನರು ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಕೂಡ ಬಲಿಯಾಗಿದ್ದಾರೆ. ಸಸಾರಮ್ ನಿಂದ ಸ್ಕಾರ್ಪಿಯೋ ಕಾರು ವಾರಣಾಸಿ ಕಡೆಗೆ ಹೋಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 2 ಬಳಿಯ ದೇವಕಲಿ ಗ್ರಾಮದ ಬಳಿ ಮೊಹಾನಿಯಾ ತಲುಪಿದ ತಕ್ಷಣ, ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಇದಾದ ಬಳಿಕ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಗೆ ನುಗ್ಗಿದೆ. ಆ ಲೇನ್‌ನಲ್ಲಿ ಬರುತ್ತಿದ್ದ ಕಂಟೈನರ್ವೊಂದು ಸ್ಕಾರ್ಪಿಯೋಗೆ ರಭಸದಿಂದ ಡಿಕ್ಕಿಯಾಗಿದೆ.
ಕಂಟೈನರ್ ಡಿಕ್ಕಿಯ ರಭಸಕ್ಕೆ ಸ್ಕಾರ್ಪಿಯೋ ತೂರಿಬಿದ್ದಿದೆ. ಘಟನೆಯ ನಂತರ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಸಾಕಷ್ಟು ಪ್ರಯತ್ನದ ಬಳಿಕ ಸ್ಕಾರ್ಪಿಯೋದಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮೊಹಾನಿಯಾ ಎಸ್‌ಡಿಪಿಒ ದಿಲೀಪ್‌ಕುಮಾರ್ ಅವರೇ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಮೃತರ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಮೃತಪಟ್ಟವರು ಎಲ್ಲಿಂದ ಬಂದವರು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದರು.
''ಉತ್ತರ ಪ್ರದೇಶ ಕಡೆಗೆ ಹೋಗುತ್ತಿದ್ದ ಸ್ಕಾರ್ಪಿಯೋ ಕಾರು ಮೊದಲು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಡಿವೈಡ್ ಮುರಿದು ಇನ್ನೊಂದು ಬದಿಗೆ ಹೋಗಿದೆ. ಅಲ್ಲಿ ಬರುತ್ತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ಸ್ಕಾರ್ಪಿಯೋದಲ್ಲಿದ್ದ ಎಲ್ಲಾ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಕೂಡ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ವಾಹನ ತೆರವು ಕಾರ್ಯಾಚರಣೆ ಮುಗಿದಿದೆ. ಮೃತರ ಬಗ್ಗೆ ಹೆಚ್ಚಿನ ವಿವರಗಳನ್ನು ಪತ್ತೆ ಮಾಡಲಾಗುತ್ತಿದೆ." - ಮೊಹಾನಿಯಾ ಎಸ್‌ಡಿಪಿಒ ದಿಲೀಪ್ ಕುಮಾರ್ ತಿಳಿಸಿದರು.