ಕೋಲ್ಕತ್ತಾ, ಪಶ್ಚಿಮ ಬಂಗಾಳ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಎಸ್‌ಪ್ಲಾನೇಡ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಏಳು ಕಿರಿಯ ವೈದ್ಯರಲ್ಲಿ ಒಬ್ಬರನ್ನು ಗುರುವಾರ ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪವಾಸದಿಂದಾಗಿ ಒಬ್ಬ ಕರಿಯ ವೈದ್ಯನ ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅನಿಕೇತ್ ಮಹತೋ ಅವರ ಆರೋಗ್ಯವು ಗುರುವಾರ ಬೆಳಗ್ಗೆಯಿಂದಲೇ ಹದಗೆಡಲು ಪ್ರಾರಂಭಿಸಿತು. ಅದು ರಾತ್ರಿಯ ಹೊತ್ತಿಗೆ ಗಂಭೀರವಾಯಿತು. ನಂತರ ಅವರನ್ನು ಆಸ್ಪತ್ರೆಗೆ ಸೇರಿಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಅವರ ಜೊತೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಇನ್ನಿತರ ಸಹ ಕಿರಿಯ ವೈದ್ಯರು ಹೇಳಿದ್ದಾರೆ.
ಹೋರಾಟದ ಶಕ್ತಿ ಇನ್ನೂ ಉಳಿದುಕೊಂಡಿದೆ; ಪ್ರತಿಭಟನಾ ನಿರತ ಮಹತೋ ಅವರು ಆರ್.ಜಿ. ಕರ್ ಆಸ್ಪತ್ರೆ ಕಿರಿಯ ವೈದ್ಯರಾಗಿದ್ದು, ಅದೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಅಲ್ಲಿನ ತೀವ್ರ ನಿಗಾ ಘಟಕಕ್ಕೆ ಸೇರಿಸಲು ಸೂಚಿಸಿದ್ದಾರೆ. ಕಳೆದ ಶನಿವಾರ ಸಂಜೆ ವಿವಿಧ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಆರು ಕಿರಿಯ ವೈದ್ಯರು ಆಮರಣಾಂತ ಉಪವಾಸ ಆಂದೋಲನ ಪ್ರಾರಂಭಿಸಿದ್ದರು. ಮಹಾತೋ ಭಾನುವಾರ ಸಂಜೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
’ಸರ್ಕಾರ ಬೇಡಿಕೆ ಪರಿಗಣಿಸದಿರುವುದು ದುರದೃಷ್ಟಕರ’: ಆರೋಗ್ಯ ಹದಗೆಟ್ಟಿದ್ದರೂ, ಉಪವಾಸ ಮುಂದುವರಿಸಲು ಮಹತೋ ಅವರ ಮಾನಸಿಕ ಶಕ್ತಿ ಇನ್ನೂ ಅಖಂಡವಾಗಿದೆ ಎಂದು ಅವರ ಸಹ ವೈದ್ಯರು ಹೇಳಿದ್ದಾರೆ. ಈ ವಿಷಯದ ಕುರಿತು ಮಾತನಾಡಿರುವ ಚಳವಳಿಯ ಪ್ರಮುಖ ಭಾಗವಾಗಿರುವ ವೈದ್ಯ ಸುಬ್ರಣಾ ಗೋಸ್ವಾಮಿ, ರಾಜ್ಯ ಸರ್ಕಾರವು ಕಿರಿಯ ವೈದ್ಯರ ಬೇಡಿಕೆಯನ್ನು ಪರಿಗಣಿಸದಿರುವುದು ದುರದೃಷ್ಟಕರ ಎಂದಿದ್ದಾರೆ .ಬೇಡಿಕೆ ಈಡೇರುವವರೆಗೂ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಇದೇ ವೇಳೆ ಅವರು ಹೇಳಿದ್ದಾರೆ.
ಬೇಡಿಕೆ ಈಡೇರಿಸಲು ಇದು ಸಕಾಲ: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಇತರ ಆರು ಕಿರಿಯ ವೈದ್ಯರ ಆರೋಗ್ಯ ಸ್ಥಿತಿ ಇಲ್ಲಿಯವರೆಗೆ ಹೆಚ್ಚು ಕಡಿಮೆ ಸ್ಥಿರವಾಗಿದೆ. ಆದರೆ, ನಾಳೆ ಅವರ ಸ್ಥಿತಿ ಏನಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ, ಆದ್ದರಿಂದ ರಾಜ್ಯ ಸರ್ಕಾರ ಅವರ ಬೇಡಿಕೆಗಳನ್ನು ಪರಿಗಣಿಸಲು ಇದು ಸಕಾಲವಾಗಿದೆ ಎಂದು ಗೋಸ್ವಾಮಿ ಹೇಳಿದ್ದಾರೆ.
ಇದನ್ನು ಓದಿ:ಐಸಿಸ್ ಭಾಗವಾದ ಹಿಜ್ಬ್ ಉತ್ ತಹ್ರೀರ್ ಸಂಘಟನೆ ಮೇಲೆ ಭಾರತ ನಿಷೇಧ