ಕೋಲ್ಕತ್ತಾ (ಪಶ್ಚಿಮಬಂಗಾಳ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ರಾಮ ನವಮಿಗೆ ಸಾರ್ವಜನಿಕ ರಜೆ ಘೋಷಿಸಿದೆ. ಏಪ್ರಿಲ್ 17 ರಂದು ರಾಮ ನವಮಿಗೂ ಮೊದಲು ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ರಾಜ್ಯದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು, ಅವುಗಳ ಸಂಬಂಧಿತ ಸಂಸ್ಥೆಗಳು ಮತ್ತು ಉದ್ಯಮಗಳು ಏಪ್ರಿಲ್ 17ರ ರಾಮನವಮಿಯಂದು ಮುಚ್ಚಿರುತ್ತವೆ. ಶ್ರೀರಾಮನ ಆರಾಧನೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅವಕಾಶ ನೀಡಲಾಗುತ್ತದೆ ಎಂದು ನಮೂದಿಸಲಾಗಿದೆ.
ಮೆರವಣಿಗೆ ಮೇಲೆ ಕಲ್ಲು ತೂರಾಟ: ಪಶ್ಚಿಮ ಬಂಗಾಳದಲ್ಲಿ ಕೋಮುಗಲಭೆಗಳು ಆಗಾಗ ಭುಗಿಲೇಳುತ್ತಲೇ ಇರುತ್ತವೆ. ಕೆಲ ವರ್ಷಗಳಲ್ಲಿ ರಾಜ್ಯದಲ್ಲಿ ರಾಮನವಮಿ ಮೆರವಣಿಗೆಗೆ ಸಂಬಂಧಿಸಿದಂತೆ ಹಿಂಸಾಚಾರಗಳು ನಡೆದಿವೆ. ಕಳೆದ ವರ್ಷ, ರಾಮ ನವಮಿ ಮೆರವಣಿಗೆ ನಡೆಸುತ್ತಿದ್ದಾಗ ಮೂರು ಸ್ಥಳಗಳಿಂದ ಕಲ್ಲು ತೂರಾಟ ನಡೆದು, ಹಿಂಸಾಚಾರ ಉಂಟಾಗಿತ್ತು. ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈ ಪ್ರಕರಣದ ತನಿಖೆ ನಡೆಸುತ್ತಿದೆ.
ರಾಮನವಮಿಗೆ ರಜೆ ನೀಡದ ಸರ್ಕಾರದ ಧೋರಣೆಯನ್ನು ಬಿಜೆಪಿ ಟೀಕಿಸಿತ್ತು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ರಾಮನವಮಿಯಂದು ರಜೆ ಘೋಷಿಸದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿವೇಶನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಸರ್ಕಾರ ರಜೆ ಘೋಷಣೆ ಮಾಡಿದೆ.
ಕಲ್ಲು ತೂರಾಟ ತಡೆಯಿರಿ: ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಮತ್ತು ಪಶ್ಚಿಮಬಂಗಾಳದ ಕೇಂದ್ರ ವೀಕ್ಷಕ ಅಮಿತ್ ಮಾಳವಿಯಾ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಜೈ ಶ್ರೀ ರಾಮ್ ಘೋಷಣೆಗಳನ್ನು ಕೇಳಿದಾಗಲೆಲ್ಲ ಸಿಎಂ ಮಮತಾ ಬ್ಯಾನರ್ಜಿ ಅವರು ಕುಪಿತರಾಗುತ್ತಿದ್ದರು. ಆದರೆ, ಕೊನೆಗೆ ರಾಮ ನವಮಿಯಂದು ಸಾರ್ವಜನಿಕ ರಜಾ ದಿನ ಘೋಷಿಸಿದ್ದಾರೆ. ಹಿಂದೂ ವಿರೋಧಿ ಆಕ್ರೋಶವನ್ನು ತಣಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ತಡವಾಗಿಯಾದರೂ, ಉತ್ತಮ ನಿರ್ಧಾರ ಪ್ರಕಟಿಸಿದೆ. ಇನ್ನು ಮುಂದೆ ಪ್ರಮುಖವಾಗಿ ರಾಮನವಮಿ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ.. ಸಂಧ್ಯಾ ಬಜಾರ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನ
ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರ 2011ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಹಿಂದೂ ಹಬ್ಬಕ್ಕೆ ಸಾರ್ವಜನಿಕ ರಜೆ ನೀಡಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನಾವಳಿಗಳನ್ನು ಗಮನಿಸಿ ಸರ್ಕಾರ ಈ ಹೆಜ್ಜೆ ಇಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.