ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟರೂ ಯಾವುದೇ ಆರೋಗ್ಯಯುತ ಚರ್ಚೆ ನಡೆಯದೇ ಗದ್ದಲ-ಪ್ರತಿಭಟನೆಗೆ ಮಾತ್ರ ಸೀಮಿತವಾಗಿದೆ. ಇದರ ಪರಿಣಾಮ ಇಂದೂ ಕೂಡ ರಾಜ್ಯಸಭಾ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಇತ್ತ ಲೋಕಸಭೆ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಗಿದೆ.
ರಾಜ್ಯಸಭೆ ಕಲಾಪ: ಇಂದು ರಾಜ್ಯಸಭೆ ಸೇರುತ್ತಿದ್ದಂತೆ ಅದಾನಿ ಸಂಸ್ಥೆಯ ಮೇಲಿನ ಲಂಚದ ಆರೋಪ ಪ್ರಕರಣ, ಮಣಿಪುರ ಹಾಗೂ ಸಂಭಾಲ್ ಹಿಂಸಾಚಾರ ವಿಚಾರದ ಚರ್ಚೆಗೆ ಸಭಾಪತಿಗಳು ನೋಟಿಸ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ನಿಯಮ 267ರ ಅಡಿ 17 ನೋಟಿಸ್ ಅನ್ನು ಸಭಾಪತಿ ಜಗದೀಪ್ ಧಂಖರ್ ತಿರಸ್ಕರಿಸಿದರು. ಚರ್ಚೆಗೆ ಅನುಮತಿ ನೀಡುವಂತೆ ಪ್ರತಿಪಕ್ಷಗಳ ನಾಯಕರು ಪ್ರತಿಭಟಿಸಿ ಘೋಷಣೆ ಕೂಗಿದರು. ಈ ವೇಳೆ ಗದ್ದಲ ಹೆಚ್ಚಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಇದಕ್ಕೂ ಮುನ್ನ ಮಾತನಾಡಿದ ಸಭಾಪತಿ, "ಪದೇ ಪದೇ ಪ್ರತಿಭಟನೆ ನಡೆಸುವ ಮೂಲಕ ಈಗಾಗಲೇ ಮೂರು ದಿನದ ಕಲಾಪ ವ್ಯರ್ಥವಾಗಿದೆ" ಎಂದು ಬೇಸರ ಹೊರಹಾಕಿದರು.
ಲೋಕಸಭೆ ಕಲಾಪ: ಲೋಕಸಭೆಯಲ್ಲೂ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ಸದಸ್ಯರು ಅನೇಕ ವಿಚಾರಗಳ ಕುರಿತು ಚರ್ಚೆಗೆ ಅನುಮತಿ ಕೋರಿದರು. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಸೇರಿದಂತೆ ಇತರೆ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, "ಪ್ರಶ್ನೋತ್ತರ ಅವಧಿಯು ಸದಸ್ಯರ ಸಮಯ. ಇದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಜನರು ಸದನದಲ್ಲಿ ಸುಗಮ ಕಲಾಪ ಮತ್ತು ಚರ್ಚೆಯನ್ನು ಬಯಸುತ್ತಾರೆ" ಎಂದು ಕಿವಿಮಾತು ಹೇಳಿದರು.
ಇದಕ್ಕೂ ಮುನ್ನ ಸದನದಲ್ಲಿ 10 ನಿಮಿಷ ಪ್ರಶ್ನೋತ್ತರ ಅವಧಿಯಲ್ಲಿ ಎರಡು ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲಾಯಿತಾದರೂ, ಬಳಿಕ ನಡೆದ ಗದ್ದಲದಿಂದ ಮಧ್ಯಾಹ್ನಕ್ಕೆ ಕಲಾಪ ಮುಂದೂಡಲಾಯಿತು.
ಇಂದಿಗೆ ಸದನ ಆರಂಭವಾಗಿ ನಾಲ್ಕು ದಿನ ಕಳೆದಿದ್ದು, ಯಾವುದೇ ಆರೋಗ್ಯಯುತ ಚರ್ಚೆ ಸಾಗಿಲ್ಲ. ಅದಾನಿ ಲಂಚ ಪ್ರಕರಣ, ಸಂಭಾಲ್, ಮಣಿಪುರ ಹಿಂಸಾಚಾರ ವಿಷಯ ಚರ್ಚೆಗೆ ಅನುಮತಿ ನೀಡುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.
ಇದನ್ನೂ ಓದಿ: ಸಂಸತ್ತಿನ ಚಳಿಗಾಲದ ಅಧಿವೇಶನ: 3ನೇ ದಿನವೂ ಮುಂದುವರೆದ ಗದ್ದಲ; ನಾಳೆಗೆ ಉಭಯ ಸದನ ಮುಂದೂಡಿಕೆ